ವಾಷಿಂಗ್ಟನ್: ಬೇಹುಗಾರಿಕೆ ಗಂಭೀರ ಆರೋಪ ಹೊತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕ ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದ ಅನುಸಾರ ತಪ್ಪೊಪ್ಪಿಕೊಳ್ಳಲಿದ್ದಾರೆ ಮತ್ತು ಆ ಒಪ್ಪಂದದ ಆಧಾರದಲ್ಲಿ ಅವರು ಲಂಡನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ ಅಮೆರಿಕ 2010ರಲ್ಲಿ ನಡೆಸಿದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಮಿಲಿಟರಿಯ ಕೆಲ ರಹಸ್ಯ ಮಾಹಿತಿಗಳನ್ನು ಅಸ್ಸಾಂಜೆ ಅವರು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿದ್ದರು. ಆ ಬಳಿಕ ಅಸ್ಸಾಂಜೆ ವಿರುದ್ಧ ಅಮೆರಿಕ, ಬೇಹುಗಾರಿಕೆ ಕಾನೂನಿನ ಉಲ್ಲಂಘನೆ ಸೇರಿದಂತೆ 18 ಪ್ರಕರಣಗಳನ್ನು ದಾಖಲಿಸಿತ್ತು.
ಬುಧವಾರ ಅಸ್ಸಾಂಜೆ ಅವರು ಮರಿಯಾನಾ ದ್ವೀಪದಲ್ಲಿರುವ ಯುಎಸ್ ಫೆಡರಲ್ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆಯಿದೆ. ಅಲ್ಲಿ ಅವರು ರಕ್ಷಣೆಗೆ ಸಂಬಂಧಪಟ್ಟ ರಹಸ್ಯ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಬಹಿರಂಗಗೊಳಿಸಿದ್ದಕ್ಕಾಗಿ ತಪ್ಪಿಸ್ಥನೆಂದು ಒಪ್ಪಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಅಸ್ಸಾಂಜೆ ಅವರನ್ನು ಬಂಧಿಸಿ ಲಂಡನ್ ಜೈಲಿಗೆ ಹಾಕಲಾಗಿತ್ತು. ಅದಕ್ಕೂ ಮುನ್ನ ಅವರು ಲಂಡನ್‌ನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ಏಳು ವರ್ಷ ಆಶ್ರಯ ಪಡೆದಿದ್ದರು.
ಬಿಡುಗಡೆಯ ನಂತರ ಅವರು ಆಸ್ಪ್ರೇಲಿಯಾಕ್ಕೆ ಮರಳುವ ಸಾಧ್ಯತೆಯಿದೆ.