ಚೆನ್ನೈ: ತಮಿಳುನಾಡಿನಲ್ಲಿ ಈ ಹಿಂದೆ ಇದ್ದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡದೇ ಇದ್ದಿದ್ದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯ ಜಯದ ಓಟವನ್ನು ತಡೆಯಲು ಸಾಧ್ಯವಾಗುತ್ತಿತ್ತೇ?
ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿಯ ಒಟ್ಟು ಮತ ಪ್ರಮಾಣವನ್ನು ಗಮನಿಸಿದರೆ, ಈ ಎರಡೂ ಪಕ್ಷಗಳು ಕನಿಷ್ಠ ಡಜನ್ ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು ಎನ್ನುವುದು ಗೊತ್ತಾಗುತ್ತದೆ.
ಎಐಎಡಿಎಂಕೆ ಶೇ 20.46ರಷ್ಟು ಮತಗಳನ್ನು ಪಡೆದಿದ್ದರೆ, ಅದರ ಮಿತ್ರಪಕ್ಷವಾದ ಡಿಎಂಡಿಕೆ ಶೇ 2.5ರಷ್ಟು ಮತಗಳನ್ನು ಗಳಿಸಿದೆ. ಬಿಜೆಪಿ ಶೇ 11.24 ಮತ್ತು ಪಿಎಂಕೆ ಶೇ 4.2ರಷ್ಟು ಮತ ಗಳಿಸಿವೆ. ಬಿಜೆಪಿ ಮಿತ್ರಪಕ್ಷಗಳ ಒಟ್ಟು ಮತ ಪ್ರಮಾಣ ಶೇ 18.28 ಆಗಿದೆ. ಇವೆಲ್ಲವನ್ನು ಗಮನಿಸಿದರೆ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಈ ಬಾರಿಯೂ ಮುಂದುವರೆದಿದ್ದರೆ, ರಾಜ್ಯದಲ್ಲಿ ಗಮನಾರ್ಹ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಬಹುದಿತ್ತು ಎನ್ನುವುದು ವೇದ್ಯವಾಗುತ್ತದೆ.
ಇದನ್ನು ಒಪ್ಪಿಕೊಳ್ಳುವ ಬಿಜೆಪಿ ಮುಖಂಡ ಅಣ್ಣಾಮಲೈ, 'ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕೂಟ ಈ ಬಾರಿ ಇದ್ದಿದ್ದರೆ, 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಇಷ್ಟಾದರೂ, ಬಿಜೆಪಿ ಶೇ 11ರಷ್ಟು ಮತಗಳನ್ನು ಪಡೆದಿರುವುದು ದೊಡ್ಡ ಬೆಳವಣಿಗೆ' ಎಂದು ಹೇಳಿದ್ದಾರೆ.
ಎಸ್‌ಪಿಎ ಕೂಟವು ಎಲ್ಲ 39 ಸ್ಥಾನಗಳನ್ನು ಗೆದ್ದಿದ್ದರೂ, ಅದರ ಮತಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶೇ 46.97ಕ್ಕೆ ಇಳಿದಿದೆ. 2019ರಲ್ಲಿ 38 ಸ್ಥಾನಗಳಲ್ಲಿ ಜಯ ಗಳಿಸಿದ್ದ ಎಸ್‌ಪಿಎ ಶೇ 53.15 ಮತ ಪ್ರಮಾಣ ಪಡೆದಿತ್ತು. ಅದರ ಪೈಕಿ ಡಿಎಂಕೆ ಮತಪ್ರಮಾಣವು ಶೇ 33.52ರಿಂದ ಶೇ 26.93ಕ್ಕೆ ಕುಸಿದಿದ್ದರೆ, ಕಾಂಗ್ರೆಸ್ ಮತಪ್ರಮಾಣ ಶೇ 12.61ರಿಂದ ಶೇ 10.67ಕ್ಕೆ ಕುಸಿದಿದೆ.
ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಎಸ್‌ಪಿಎ ಅಭ್ಯರ್ಥಿಗಳ ಗೆಲುವಿನ ಅಂತರವೂ ಕಡಿಮೆ ಆಗಿದ್ದು, ಆರು ಮಂದಿ ಒಂದು ಲಕ್ಷ ಮತಗಳಿಗೂ ಕಡಿಮೆ ಅಂತರದಿಂದ ಗೆದ್ದಿದ್ದಾರೆ.