ಸಾಮಾನ್ಯವಾಗಿ ನಮ್ಮ ನಮ್ಮ ಮನೆಗಳಲ್ಲಿ ನಾವೇನಾದರೂ ಊಟ ಮಾಡಿದ ನಂತರ ನೀರು (Water) ಕುಡಿಯಲು ನೀರಿನ ಲೋಟವನ್ನು ಹಿಡಿದುಕೊಂಡರೆ, ಮನೆಯಲ್ಲಿರುವ ಹಿರಿಯರು ಊಟ ಆದ ತಕ್ಷಣವೇ ನೀರು ಕುಡಿಬೇಡ, ಸ್ವಲ್ಪ ಹೊತ್ತು ಬಿಡು ಅಂತ ಹೇಳುವುದನ್ನು ನಾವು ಪದೇ ಪದೇ ಕೇಳಿಸಿಕೊಂಡಿರುತ್ತೇವೆ.
ಅನೇಕರು ಈ ಮಾತನ್ನು ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ, ಊಟ ಆದ ತಕ್ಷಣ ನೀರು ಕುಡಿಯಬೇಕು ಅಂತ ಅನ್ನಿಸುವುದು ತುಂಬಾನೇ ಸಹಜವಾದ ವಿಷಯ. ಆದರೆ ಈ ಸಹಜವಾದ ಬಾಯಾರಿಕೆಯನ್ನು ತಣಿಸಿಕೊಳ್ಳುವುದನ್ನು ಜನರು ಏಕೆ ಬೇಡ ಅನ್ನುತ್ತಾರೆ ಎಂಬ ಪ್ರಶ್ನೆ ನಮ್ಮ ನಿಮ್ಮೆಲ್ಲರ ತಲೆಯಲ್ಲಿ ತುಂಬಾನೇ ಸಲ ಗಿರಕಿ ಹೊಡೆದಿರುತ್ತದೆ.
ಊಟ ಮಾಡಿದ ತಕ್ಷಣ ನೀರು ಕುಡಿಯಬಹುದೇ?
ಊಟದ ಮುಂಚೆ ನೀರು ಕುಡಿಯಿರಿ ಮತ್ತು ಊಟದ ನಂತರ ಎಂದರೆ ಗಂಟೆಯ ನಂತರ ನೀರು ಕುಡಿಯಿರಿ ಎಂದು ವೈದ್ಯರು ಹೇಳುತ್ತಾರೆ. ಈ ಊಟ ಮಾಡಿದ ಅಥವಾ ಮೊದಲು ನೀರು ಕುಡಿಯುವುದರ ಬಗ್ಗೆ ಅನೇಕರಲ್ಲಿ ತುಂಬಾನೇ ಗೊಂದಲ ಇದೆಯಲ್ಲಾ? ಬನ್ನಿ ಹಾಗಾದರೆ ಈ ಗೊಂದಲಕ್ಕೆ ತೆರೆ ಎಳೆಯಲಾಗಿದೆ ನೋಡಿ ಈ ಲೇಖನದಲ್ಲಿ. ಬಹಳಷ್ಟು ಮಂದಿಗೆ ಊಟ ಆದ ನಂತರ ಅವರ ಕೈ ಮೊದಲಿಗೆ ಹೋಗುವುದೇ ಗ್ಲಾಸ್ ಹತ್ತಿರಕ್ಕೆ ಅಂತ ಹೇಳಬಹುದು. ಆದರೆ ಊಟದ ನಂತರ ನೀರು ಕುಡಿಯುವ ಅಭ್ಯಾಸದ ಬಗ್ಗೆ ಪೌಷ್ಟಿಕ ತಜ್ಞೆ ಕರಿಷ್ಮಾ ಷಾ ಅವರು ಏನಂತ ವಿವರಣೆಯನ್ನು ನೀಡಿದ್ದಾರೆ ನೋಡಿ.
ಊಟದ ನಂತರ ತಕ್ಷಣವೇ ನೀರು ಕುಡಿಯುವುದರಿಂದ ಏನೆಲ್ಲಾ ನಷ್ಟಗಳಿವೆ ನೋಡಿ..
ಜೀರ್ಣಕಾರಿ ರಸವನ್ನು ದುರ್ಬಲಗೊಳಿಸುತ್ತದೆ: ಊಟ ಮಾಡಿದ ತಕ್ಷಣ ನೀವು ನೀರನ್ನು ಕುಡಿದರೆ, ಅದು ನಿಮ್ಮ ಹೊಟ್ಟೆಯಲ್ಲಿರುವಂತಹ ಅಗತ್ಯ ಆಮ್ಲಗಳು ಮತ್ತು ಕಿಣ್ವಗಳನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲದೆ ಇದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಿಮಗೆ ಊಟ ಆದ ನಂತರ ತುಂಬಾನೇ ನೀರು ಕುಡಿಯಬೇಕು ಅಂತ ಬಾಯಾರಿಕೆ ಅನ್ನಿಸಿದರೆ, ಸಣ್ಣ ಸಿಪ್ ಕುಡಿಯಿರಿ, ಹೊಟ್ಟೆ ತುಂಬಾ ನೀರು ಕುಡಿಯಲು ಹೋಗಬೇಡಿ ಅಂತ ಹೇಳುತ್ತಾರೆ ಕರಿಷ್ಮಾ ಷಾ.
ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತದೆ: ನಿಮ್ಮ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ತಕ್ಷಣವೇ ನೀರನ್ನು ಕುಡಿಯುವುದು ನಿಮ್ಮ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ನಿಮ್ಮ ದೇಹವು ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ತುಂಬಾನೇ ದುರ್ಬಲವಾಗುತ್ತದೆಯಂತೆ. ಹಾಗಾಗಿ ನೀವು ಊಟದ ನಂತರ ಒಂದು ಲೋಟ ನೀರು ಕುಡಿಯುವುದನ್ನು ಸ್ವಲ್ಪ ಸಮಯದವರೆಗೆ ಮುಂದಕ್ಕೆ ಹಾಕುವುದು ಒಳ್ಳೆಯದು ಅಂತಾರೆ ಪೌಷ್ಟಿಕ ತಜ್ಞೆ.
ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳನ್ನು ದುರ್ಬಲಗೊಳಿಸುವುದರಿಂದ ಊಟದ ಜೊತೆಗೆ ನೀರು ಕುಡಿಯುವುದನ್ನು ತಪ್ಪಿಸಿ. ನಿಮಗೆ ತುಂಬಾನೇ ನೀರು ಕುಡಿಲೇಬೇಕು ಅಂತ ಅನ್ನಿಸಿದರೆ ಊಟಕ್ಕೆ ಕೂರುವ 10 ನಿಮಿಷಗಳ ಮೊದಲು ಅಥವಾ ನಂತರ ನೀರು ಕುಡಿಯಿರಿ.
ಇನ್ಸುಲಿನ್ ಮಟ್ಟದ ಮೇಲೆ ಭಾರಿ ಪರಿಣಾಮ ಬೀರುತ್ತದೆ: ಊಟದ ನಂತರ ನೀರು ಕುಡಿಯುವುದು ನಿಮ್ಮ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಕೊಬ್ಬಿನ ಶೇಖರಣೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಕೆಲವು ಪುರಾವೆಗಳು ಸೂಚಿಸುತ್ತವೆ. ಅತ್ಯುತ್ತಮ ಜೀರ್ಣಕ್ರಿಯೆ ಮತ್ತು ಆರೋಗ್ಯಕ್ಕಾಗಿ, ಊಟದ ನಂತರ 30 ನಿಮಿಷಗಳವರೆಗೆ ನೀರಿರುವ ಕಡೆಗೆ ನೀವು ಹೋಗಲೇಬೇಡಿ. ಸರಳವಾಗಿ ಹೇಳುವುದಾದರೆ ಊಟದ ನಂತರ 30 ನಿಮಿಷಗಳ ಕಾಲ ನೀರು ಕುಡಿಯುವುದನ್ನು ಮುಂದೂಡಬೇಕು. ಈ ಅರ್ಧ ಗಂಟೆಯ ವಿರಾಮವು ನಿಮ್ಮ ಜೀರ್ಣಕಾರಿ ಆರೋಗ್ಯವು ರಾಜಿಯಾಗುವುದಿಲ್ಲ ಮತ್ತು ನಿಮ್ಮ ದೇಹವು ಸಮರ್ಪಕವಾಗಿ ಹೈಡ್ರೀಕರಿಸಲ್ಪಟ್ಟಿದೆ ಎಂದು ಖಚಿತಪಡಿಸುತ್ತದೆ.