ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ 73 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ.
17ನೇ ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ನಾರಿ ಶಕ್ತಿ ವಂದನಾ ಅಂಗೀಕಾರಗೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಹೀಗಿದ್ದರೂ 2019ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ, ಈ ಬಾರಿ ಸಂಸದರಾಗಿ ಆಯ್ಕೆಯಾದ ಮಹಿಳೆಯರ ಸಂಖ್ಯೆ ಕುಸಿದಿದೆ.
2019ರ ಲೋಕಸಭಾ ಚುನಾವಣೆಯಲ್ಲಿ 78 ಮಹಿಳೆಯರು ಲೋಕಸಭಾ ಸಂಸದರಾಗಿದ್ದರು. 2014ನೇ ಲೋಕಸಭೆ ಚುನಾವಣೆಯಲ್ಲಿ 64 ಮಹಿಳೆಯರು ಆಯ್ಕೆಯಾಗಿದ್ದರು.
ಪಶ್ಚಿಮ ಬಂಗಳಾದಿಂದ 11 ಮಹಿಳೆಯರು ಗೆಲ್ಲುವ ಮೂಲಕ ಅತಿ ಹೆಚ್ಚು ಸಂಸದೆಯರನ್ನು ಲೋಕಸಭೆಗೆ ಕಳುಹಿಸುತ್ತಿರುವ ರಾಜ್ಯವೆಂಬ ಹಿರಿಮೆಗೆ ಪಾತ್ರವಾಗಿದೆ.
ಈ ಸಾರಿ ವಿವಿಧ ಪಕ್ಷ ಹಾಗೂ ಪಕ್ಷೇತರವಾಗಿ ಒಟ್ಟು 797 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯಲ್ಲಿ ಅತಿ ಹೆಚ್ಚು (69) ನಂತರ ಕಾಂಗ್ರೆಸ್‌ನಿಂದ 41 ಮಹಿಳೆಯರು ಸ್ಪರ್ಧಿಸಿದ್ದರು.
ಬಿಜೆಪಿಯಿಂದ ಅತಿ ಹೆಚ್ಚು ಮಹಿಳೆಯರು (30) ಗೆದ್ದಿದ್ದಾರೆ. ಕಾಂಗ್ರೆಸ್ 14, ಟಿಎಂಸಿ 11, ಎಸ್‌ಪಿ 4, ಡಿಎಂಕೆ 3. ಇವು ಹೆಚ್ಚು ಮಹಿಳಾ ಸಂಸದರನ್ನು ಕೊಟ್ಟ ಇತರ ಪಕ್ಷಗಳು.
ಲೋಕಸಭೆಯಲ್ಲಿ ಶೇ 13 ರಷ್ಟು ಮಹಿಳಾ ಸಂಸದರ ಪ್ರಮಾಣ ಇರಲಿದೆ. 17 ನೇ ಲೋಕಸಭೆಯಲ್ಲಿ ಶೇ 14 ರಷ್ಟಿತ್ತು.
ಮಂಡಿಯಿಂದ ಇದೇ ಮೊದಲ ಬಾರಿಗೆ ನಟಿ ಕಂಗನಾ ರಣಾವತ್ ಆಯ್ಕೆಯಾಗಿದ್ದಾರೆ. ಹೇಮಾ ಮಾಲಿನಿ, ಮಹುವಾ ಮೋಯಿತ್ರಾ, ಸುಪ್ರೀಯಾ ಸುಳೆ, ಡಿಂಪಲ್ ಯಾದವ್ ಪುನರಾಯ್ಕೆಯಾದ ಪ್ರಮುಖ ಮಹಿಳಾ ಸಂಸದರಾಗಿದ್ದಾರೆ.
ಕರ್ನಾಟಕದ ದಾವಣಗೆರೆಯಿಂದ ಡಾ. ಪ್ರಭಾ ಮಲ್ಲಿಕಾರ್ಜುನ್, ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ.