ಹೈದರಾಬಾದ್: ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದುಲ್ಮಿಟ್ಟಾ ಮಂಡಲದ ಭೈರೋನ್ ಪಲ್ಲಿಯಲ್ಲಿ ಕರ್ನಾಟಕದ ರಾಜಮನೆತನ ಚಾಲುಕ್ಯರ ಕಾಲದ ಪುರಾತನ ಮೂರ್ತಿ ಪತ್ತೆಯಾಗಿದೆ.
ಭೈರೋನ್ ಪಲ್ಲಿ ಗ್ರಾಮದ ಪುರಾತನ ಜೈನ ದೇವಾಲಯದ ಆವರಣದ ಚಾಲುಕ್ಯರ ಕಾಲದಲ್ಲಿ ಕೆತ್ತನೆ ಮಾಡಿರುವ ಶಿಲಾಮೂರ್ತಿಯನ್ನು ಗುರುತಿಸಲಾಗಿದೆ.
ಕಲ್ಲಿನಲ್ಲಿ ಕೆತ್ತಿರುವ ಸುಂದರ ಕೆತ್ತನೆಯಲ್ಲಿ ಧ್ಯಾನ ಮಾಡುತ್ತಿರುವ ಮಹಾನ್ ನಾಯಕನ ಚಿತ್ರಗಳು ಕಂಡು ಬಂದಿವೆ. ಈ ಹಿಂದೆ ಕೊಳನುಪಾಕ ಮತ್ತು ವೇಮುಲವಾಡದಲ್ಲಿ ಇದೇ ರೀತಿಯ ಶಿಲ್ಪ ಕೆತ್ತನೆಗಳು ಕಂಡುಬಂದಿದ್ದವು.
ಭೈರೋನ್ ಪಲ್ಲಿಯಲ್ಲಿಯ ವೀರಣ್ಣ(ಶಿವ) ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ಸಣ್ಣ ರಂಧ್ರ ಉಂಟಾಗಿದೆ. ಆಗ ಸ್ಥಳೀಯ ಜನರು ಅದನ್ನು ಪರಿಶೀಲಿಸಿದಾಗ ಈ ಮೂರ್ತಿ ಕಂಡುಬಂದಿದ್ದು, ಹೊರತೆಗೆದಿದ್ದಾರೆ. ಬಳಿಕ ಗ್ರಾಮಸ್ಥರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದಾಗ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಕಲ್ಲನ್ನು ಪರಿಶೀಲಿ ಇದು ಚಾಲುಕ್ಯರ ಕಾಲದ್ದು ಎಂದು ಗುತಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪುರಾತತ್ವ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಇತ್ತೀಚೆಗೆ ಪತ್ತೆಯಾದ ಈ ಶಿಲೆ ಜೈನ ಚೌಮುಖಿ ಶಿಲ್ಪವಾಗಿದ್ದು, 5 ಅಡಿ ಎತ್ತರದ ಕೆತ್ತಲಾಗಿದೆ. ನಾಲ್ಕು ಕಡೆಗಳಲ್ಲಿರುವ ಶಿಲ್ಪಗಳು 24ನೇ ಜೈನ ತೀರ್ಥಂಕರ ಮಹಾ ವೀರುಡಿಯ ಧ್ಯಾನಸ್ಥ ಚಿತ್ರಗಳೆಂದು ಹೇಳಲಾಗುತ್ತದೆ. ಈ ಹಿಂದೆ ಕೊಳನುಪಾಕ ಮತ್ತು ವೇಮುಲವಾಡದಲ್ಲಿ ಈ ರೀತಿಯ ಶಿಲ್ಪಗಳು ಕಂಡುಬಂದಿವೆ ಎಂದರು.
ಜೈನರು ಅವರನ್ನು 'ಸರ್ವತೋಭದ್ರ' ಎಂದು ಕರೆಯುತ್ತಾರೆ. ಈ ಶಿಲ್ಪಗಳು ದೊರೆತ ಪ್ರದೇಶಗಳು ಹಿಂದೆ ಜೈನ ಧರ್ಮದ ಕೇಂದ್ರಗಳಾಗಿದ್ದವು ಎಂದು ವಿವರಿಸಲಾಗಿದೆ. ಬೌದ್ಧರಂತೆಯೇ ಜೈನರೂ ಸ್ತೂಪ, ಚೈತ್ಯಗಳನ್ನು ನಿರ್ಮಿಸುತ್ತಿದ್ದರು ಎಂಬುದು ಗ್ರಾಮದ ವೀರಣ್ಣ ದೇವಸ್ಥಾನದ ಮುಂಭಾಗದ ಶಾಸನಗಳಿಂದ ತಿಳಿದು ಬರುತ್ತದೆ.