ಡೆಹ್ರಾಡೂನ್: ಯುದ್ಧದ ಸ್ವರೂಪ ಮತ್ತು ಕ್ರಿಯಾತ್ಮಕತೆ ಬದಲಾಗುತ್ತಲೇ ಇದೆ. ಈ ಸವಾಲುಗಳನ್ನು ಎದುರಿಸಲು ತಯಾರಾಗಿ ಎಂದು ಇಲ್ಲಿಯ ಪ್ರತಿಷ್ಠಿತ ಭಾರತೀಯ ಸೇನಾ ಅಕಾಡೆಮಿಯಿಂದ (ಐಎಂಎ) ತರಬೇತಿ ಮುಗಿಸಿ ಹೊರಹೋಗುತ್ತಿರುವ ವಿದ್ಯಾರ್ಥಿಗಳಿಗೆ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನಂಟ್ ಎಂ.ವಿ. ಸುಚೀಂದ್ರ ಕುಮಾರ್ ಅವರು ಕಿವಿಮಾತು ಹೇಳಿದರು.
ಐಎಂಎನ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಅವರು, 'ತಾಂತ್ರಿಕತೆ ಮುಂದುವರೆಯುತ್ತಿರುವುದು ಆಧುನಿಕ ಯುದ್ಧಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಬಾಹ್ಯಾಕಾಶ, ಸೈಬರ್ ಮತ್ತು ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆಲ್ಲ ಯುದ್ಧದ ಸ್ವರೂಪ ಕೂಡ ಬದಲಾಗುತ್ತಿದೆ. ಇಂದು ನಡೆಯುತ್ತಿರುವ ಯುದ್ಧಗಳು ಚಿಂತನೆ, ಬುದ್ಧಿಶಕ್ತಿ ಮತ್ತು ಅವಿಷ್ಕಾರಗಳ ಯುದ್ಧ. ಈ ಸವಾಲುಗಳನ್ನು ಎದುರಿಸಲು ನೀವು ಸನ್ನದ್ಧರಾಗಿರಬೇಕು' ಎಂದು ಹೇಳಿದರು.
'ಐಎಂಎಯಂಥ ಸಂಸ್ಥೆ ನೀಡುವ ಉನ್ನತ ಮಟ್ಟದ ತರಬೇತಿ, ದೈಹಿಕ ಮತ್ತು ಮಾನಸಿಕ ದೃಢತೆ ತರಬೇತಿ, ತಾಂತ್ರಿಕ ತರಬೇತಿಯಿಂದಾಗಿ ನೀವು ಆಧುನಿಕ ಯುದ್ಧಗಳು ಒಡ್ಡುವ ಸವಾಲುಗಳಿಗೆ ಸಜ್ಜಾಗುತ್ತೀರ' ಎಂದು ಅವರು ಹೇಳಿದರು.
ಒಟ್ಟು 394 ಮಂದಿ ಶನಿವಾರ ಐಎಂಎಯಿಂದ ತರಬೇತಿ ಪಡೆದು ನಿರ್ಗಮಿಸಿದರು. ಅವರಲ್ಲಿ 355 ಮಂದಿ ಭಾರತೀಯರು ಮತ್ತು 39 ಮಂದಿ ವಿದೇಶಿಯರು.