ನವದೆಹಲಿ: 'ಸೆಂಗೋಲ್' ನ್ಯಾಯದಂಡವನ್ನು ಲೋಕಸಭೆಯಿಂದ ತೆರವು ಮಾಡಬೇಕೆಂದು ಸಮಾಜವಾದಿ ಪಕ್ಷದ(ಎಸ್‌ಪಿ) ಸಂಸದ ಆರ್.ಕೆ. ಚೌಧರಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಆಡಳಿತ ಮತ್ತು ವಿಪಕ್ಷಗಳಿಂದ ಪರ-ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ.
ಇದು 'ರಾಜ ಕ ದಂಡ'ವಾಗಿದ್ದು (ರಾಜ ದಂಡ) ರಾಜಪ್ರಭುತ್ವದ ಸಂಕೇತವಾಗಿದೆ.
ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಪ್ರಭುತ್ವವನ್ನು ಸ್ಥಾಪಿಸಿದೆ ಎಂದು ಉತ್ತರಪ್ರದೇಶದ ಮೋಹನ್ ಲಾಲ್ ಗಂಜ್‌ನ ಸಂಸದ, ಆರೋಪಿಸಿದ್ದಾರೆ. ದೇಶದಲ್ಲಿ ರಾಜದಂಡದ ಮೂಲಕ ಆಳ್ವಿಕೆ ನಡೆಸಲಾಗುತ್ತದೆಯೋ ಅಥವಾ ಸಂವಿಧಾನದ ಮೂಲಕವೋ ಎಂದು ಅವರು ಪ್ರಶ್ನಿಸಿದ್ದಾರೆ.
'"ಸಂವಿಧಾನವು ಪ್ರಜಾಪ್ರಭುತ್ವದ ಸಂಕೇತವಾಗಿದೆ. ನರೇಂದ್ರ ಮೋದಿ ನೇತೃತ್ವದ ತನ್ನ ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಬಿಜೆಪಿಯು ಲೋಕಸಭೆಯಲ್ಲಿ ಸೆಂಗೋಲ್ ಸ್ಥಾಪಿಸಿದೆ. ಸೆಂಗೋಲ್ ಎಂದರೆ ರಾಜನ ದಂಡ. ರಾಜಪ್ರಭುತ್ವ ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿದೆ. ಈಗ ಸರ್ಕಾರವನ್ನು ರಾಜದಂಡ ನಡೆಸುತ್ತದೆಯೋ ಅಥವಾ ಸಂವಿಧಾನದ ಅನ್ವಯ ನಡೆಸಲಾಗುತ್ತದೆಯೋ? ಸಂವಿಧಾನದ ಉಳಿವಿಗಾಗಿ ಸಂಸತ್ತಿನಿಂದ ಸೆಂಗೋಲ್ ತೆಗೆಯಬೇಕು' ಎಂದು ಚೌಧರಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಸೆಂಗೋಲ್ ಅನ್ನು ರಾಜದಂಡ ಎಂದು ಹೇಳುವುದಾದರೆ, ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಇದನ್ನು ಏಕೆ ಸ್ವೀಕರಿಸಿದರು. ಇದು ಸಮಾಜವಾದಿ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಈ ಮೊದಲು ಅವರು ರಾಮಚರಿತಮಾನಸವನ್ನು ಟೀಕಿಸಿದ್ದರು. ಈಗ ಭಾರತ ಮತ್ತು ತಮಿಳು ಸಂಸ್ಕೃತಿಯ ಭಾಗವಾಗಿರುವ ಸೆಂಗೋಲ್ ಅನ್ನು ಟೀಕಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮಿಳು ಸಂಸ್ಕೃತಿ ಮತ್ತು ಸೆಂಗೋಲ್‌ಗೆ ಆಗುತ್ತಿರುವ ಅಪಮಾನಕ್ಕೆ ಇಂಡಿಯಾ ಬಣದಲ್ಲಿರುವ ಡಿಎಂಕೆ ಬೆಂಬಲವಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಚೌಧರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್, ಇದು ಮೋದಿಯವರಿಗೆ ಪ್ರಜಾಪ್ರಭುತ್ವದ ಸ್ಮರಣೆ ಮಾಡಿಸುವುದಾಗಿದೆ. ಸೆಂಗೋಲ್ ಸ್ಥಾಪಿಸಿದಾಗ ಮತ್ತು ಅದರ ಮುಂದೆ ತಲೆಬಾಗಿದಾಗ ಅದು ರಾಜದಂಡ ಎಂಬುದನ್ನು ಮೋದಿ ಮರೆತಿದ್ದರು ಎನಿಸುತ್ತೆ ಎಂದಿದ್ದಾರೆ.