ನವದೆಹಲಿ: ಜೂನ್ 17ರಂದು ಸಂಭವಿಸಿದ ರೈಲು ಅಪಘಾತಕ್ಕೆ ಸರಕು ಸಾಗಣೆ ರೈಲಿನ ಪೈಲಟ್, ನ್ಯೂ ಜಲಪಾಇಗುಡಿ ವಿಭಾಗದ ನಿರ್ವಹಣಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಳೆದ ಸೋಮವಾರ ರಾಣಿಪತ್ರ ರೈಲು ನಿಲ್ದಾಣ ಹಾಗೂ ಛತ್ತರ್‌ಹಾಟ್ ಜಂಕ್ಷನ್ ನಡುವೆ ಸಂಚರಿಸುತ್ತಿದ್ದ ಕಾಂಚನ್‌ಜುಂಗಾ ರೈಲಿಗೆ ಹಿಂಬದಿಯಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿದ್ದರು.
ಸಿಗ್ನಲ್ ನಿರ್ಲಕ್ಷಿಸಿದ್ದೇ ಅಪಘಾತಕ್ಕೆ ಕಾರಣ ಎಂದು ರೈಲ್ವೆ ಬೋರ್ಡ್ ಅಧ್ಯಕ್ಷ ಜಯ ವರ್ಮಾ ಸಿನ್ಹಾ ಅವರು ಹೇಳಿಕೆ ನೀಡಿದ್ದರು. ರೈಲ್ವೆ ಸುರಕ್ಷತಾ ಆಯುಕ್ತರು ಅಪಘಾತದ ತನಿಖೆಗೂ ಆದೇಶಿಸಿದ್ದರು.
'ಆರು ಮಂದಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ತನಿಖಾ ತಂಡ ನೇಮಿಸಿದೆ. ತಂಡವು ಪ್ರಾಥಮಿಕ ಹಂತದ ತನಿಖೆ ನಡೆಸಿ, ವರದಿ ನೀಡಿದೆ. ಗೂಡ್ಸ್ ರೈಲಿನ ಪೈಲಟ್ ಸಿಗ್ನಲ್ ಉಲ್ಲಂಘಿಸಿ, ವೇಗಮಿತಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದೇ ಅಪಘಾತಕ್ಕೆ ಕಾರಣ ಎಂದು ತಂಡದಲ್ಲಿದ್ದ ಐದೂ ಸದಸ್ಯರು ದೂರಿದ್ದಾರೆ. ರಾಣಿಪತ್ರ ರೈಲು ನಿಲ್ದಾಣ ಹಾಗೂ ಛತ್ತರ್‌ಹಾಟ್ ಜಂಕ್ಷನ್ ನಡುವೆ ನ್ಯೂ ಜಲಪಾಇಗುಡಿ ವಿಭಾಗದ ನಿರ್ವಹಣಾ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲ' ಎಂದು ತಂಡದ ಉಳಿದ ಸದಸ್ಯರೊಬ್ಬರು ದೂರಿದ್ದಾರೆ.
'ಗೂಡ್ಸ್ ರೈಲಿನ ಪೈಲಟ್ ಅತ್ಯಂತ ವೇಗದಲ್ಲಿ ಅಪಾಯದ ಸ್ಥಿತಿಯಲ್ಲಿಯೂ ಸ್ವಯಂಚಾಲಿತ ಸಿಗ್ನಲ್ ದಾಟಿದ್ದನು' ತಂಡದಲ್ಲಿದ್ದ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.
'ನ್ಯೂ ಜಲಪಾಇಗುಡಿ ವಿಭಾಗದಲ್ಲಿ ಜೂನ್ 17ರಂದು ಬೆಳಿಗ್ಗೆ 5.50ರಿಂದ ಸ್ವಯಂಚಾಲಿತ, ಅರೆ ಸ್ವಯಂಚಾಲಿತ ಸಿಗ್ನಲ್‌ಗಳು ಕೆಲಸ ಮಾಡುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಿದ್ದ ರೈಲ್ವೆ ನಿಯಮವನ್ನು ಅನುಸರಿಸಿರಲಿಲ್ಲ' ಎಂದು ತನಿಖಾ ತಂಡದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಆ ಮಾರ್ಗದಲ್ಲಿದ್ದ ಎಲ್ಲ ಕೆಂಪು ಸಿಗ್ನಲ್ ದಾಟಿದ್ದ ರೈಲಿನ ಪೈಲಟ್‌ಗೆ ವೇಗದ ಮಿತಿಯೂ ತಿಳಿಸಿರಲಿಲ್ಲ. ಹಾಳಾದ ಸಿಗ್ನಲ್ ಬಳಿ ಕಾಂಚನ್‌ಜುಂಗಾ ರೈಲು ಕಾದು ನಿಂತಿದ್ದ ಸಂದರ್ಭದಲ್ಲಿಯೇ ಗೂಡ್ಸ್ ರೈಲು ಹಿಂದಿನಿಂದ ಬಂದು ಗುದ್ದಿದೆ' ಎಂದು ವರದಿಯಲ್ಲಿ ತಿಳಿಸಲಾಗಿದೆ.