ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ನಂತರ ಸಂಸತ್ ಅಧಿವೇಶನ ಆರಂಭಗೊಂಡಿದ್ದು, 2ನೇ ದಿನವಾದ ಮಂಗಳವಾರ ನೂತನ ಸಂಸದರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ಪ್ರಮಾಣ ವಚನ ಸ್ವೀಕಾರದ ನಂತರ ಹಿಂದೂರಾಷ್ಟ್ರ, ಭಾರತ, ಸಂವಿಧಾನ, ಪ್ಯಾಲೆಸ್ಟೀನ್ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿ ಸಂಸದರು ಗಮನ ಸೆಳೆದರು.
ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿ, 'ಜೈ ಸಂವಿಧಾನ, ಜೈ ಹಿಂದ್' ಎಂಬ ಘೋಷಣೆ ಕೂಗಿದರು. ಛತ್ರಪಾಲ್ ಸಿಂಗ್ ಗಂಗ್ವಾರ್ ಅವರು 'ಜೈ ಹಿಂದೂರಾಷ್ಟ್ರ, ಜೈ ಭಾರತ್' ಎಂದು ಘೋಷಣೆ ಕೂಗಿದರು. ಗಂಗ್ವಾರ್ ಅವರ ಘೋಷಣೆಗೆ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಐದನೇ ಬಾರಿಗೆ ಸಂಸತ್ ಪ್ರವೇಶಿಸಿದ್ದು, ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಪ್ರಾರ್ಥನೆ ಓದಿದರು. ಪ್ರಮಾಣವಚನ ಸ್ವೀಕಾರ ನಂತರ ತೆಲಂಗಾಣ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಜತೆಗೆ, ಜೈ ಪ್ಯಾಲೆಸ್ಟೀನ್ ಘೊಷಣೆಯನ್ನೂ ಕೂಗಿದರು. ಇದಕ್ಕೆ ಆಡಳಿತಾರೂಢ ಎನ್‌ಡಿಎ ಮಿತ್ರ ಪಕ್ಷಗಳ ಸದಸ್ಯರಿಂದ ತೀವ್ರ ಟೀಕೆ ವ್ಯಕ್ತವಾಯಿತು.
ರಾಹುಲ್ ಗಾಂಧಿ ಅವರಂತೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ಅವರೂ ಸಂವಿಧಾನ ಕೈಪಿಡಿ ಕೈಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸಿದರು.
ಮಥುರಾ ಸಂಸದೆ ಬಿಜೆಪಿಯ ಹೇಮಾ ಮಾಲಿನಿ ಅವರು 'ರಾಧೇ ರಾಧೇ' ಎಂಬ ಘೋಷಣೆಯ ಜತೆಗೆ 'ಜೈ ಶ್ರೀಕೃಷ್ಣ, ಜೈ ಶ್ರೀರಾಧಾರಮಣಜಿ, ಜೈ ಭಾರತ್ ಮಾತಾ ಕಿ' ಘೋಷಣೆಗಳನ್ನು ಕೂಗಿದರು. ಬಿಜೆಪಿಯ ಮತ್ತೊಬ್ಬ ಸಂಸದ ಕಿಶನ್ ಅವರು, 'ಹರ್ ಹರ್ ಮಹಾದೇವ್, ಜೈ ಭೋಲೇನಾಥ್' ಘೊಷಣೆ ಕೂಗಿದರು. ಮೀರತ್ ಕ್ಷೇತ್ರದ ಸಂಸದ ಬಿಜೆಪಿಯ ಅರುಣ್ ಗೋವಿಲ್ ಅವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ, 'ಜೈ ಶ್ರೀರಾಮ್, ಜೈ ಭಾರತ್' ಘೋಷಣೆ ಕೂಗಿದರು.
ಪ್ರಮಾಣ ವಚನ ಹೊರತುಪಡಿಸಿ ಬೇರೆ ಯಾವುದೇ ಘೋಷಣೆಗಳನ್ನು ಕಡತಗಳಿಗೆ ಸೇರಿಸದಂತೆ ಸ್ಪೀಕರ್ ಪೀಠದಲ್ಲಿದ್ದ ರಾಧಾ ಮೋಹನ್ ಸಿಂಗ್ ಅವರು ಸೂಚಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಸಂಸತ್ತಿನ ಹೊರಗೆ ಮಾತನಾಡಿದ ಓವೈಸಿ, ತಮ್ಮ ಘೋಷಣೆಯನ್ನು ಸಮರ್ಥಿಸಿಕೊಂಡರು. 'ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೀನ್' ಎಂದಿದ್ದು ಹೇಗೆ ತಪ್ಪಾಗುತ್ತದೆ? ಸಂವಿಧಾನದಲ್ಲಿ ಇದು ತಪ್ಪು ಎಂದು ಹೇಳಿದ್ದರೆ ತಿಳಿಸಿ. ಇತರರು ಏನು ಹೇಳಿದರು ಎಂಬುದನ್ನೂ ಆಲಿಸಬೇಕು. ಪ್ಯಾಲೆಸ್ಟೀನ್ ಕುರಿತು ಮಹಾತ್ಮಾ ಗಾಂಧಿ ಏನು ಹೇಳಿದ್ದಾರೆ ಎಂಬುದನ್ನು ನಾವೆಲ್ಲರೂ ಓದಬೇಕು' ಎಂದರು.