ವಾಷಿಂಗ್ಟನ್: 'ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಜೊತೆಗಿನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು' ಎಂದು 'ನಾಸಾ' ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.
ಭಾರತದ ಗಗನಯಾತ್ರಿಯ ಜೊತೆಗೂಡಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವುದೂ ಇದರಲ್ಲಿ ಸೇರಿದೆ ಎಂದು ಗುರುವಾರ ತಿಳಿಸಿದರು.
ಕ್ರಮವಾಗಿ ಭಾರತ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೋವಲ್ ಮತ್ತು ಜೇಕ್ ಸುಲಿವಾನ್, 'ಇಸ್ರೊದ ಗಗನಯಾತ್ರಿಗಳಿಗೆ ಅಮೆರಿಕದಲ್ಲಿ ತರಬೇತಿ ನೀಡಲಾಗುವುದು' ಎಂದು ಜಂಟಿ ಹೇಳಿಕೆ ನೀಡಿದ ಹಿಂದೆಯೇ ಈ ಮಾತು ಹೇಳಿದ್ದಾರೆ.
'ಮನುಕುಲದ ಅನುಕೂಲಕ್ಕಾಗಿ ನಿರ್ಣಾಯಕ ಮತ್ತು ಭವಿಷ್ಯದಲ್ಲಿನ ನವೀನ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಭಾರತ-ಅಮೆರಿಕ ಸಹಭಾಗಿತ್ವವನ್ನು ನಾಸಾ ಇನ್ನಷ್ಟು ವಿಸ್ತರಿಸಲಿದೆ' ಎಂದು ಬಿಲ್ ನೆಲ್ಸನ್ 'ಎಕ್ಸ್'ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಜಂಟಿ ಸಹಭಾಗಿತ್ವ ಬಲಪಡಿಸುವ ಯೋಜನೆಯ ರೂಪುರೇಷೆ ಇನ್ನಷ್ಟೇ ಸ್ಪಷ್ಟತೆ ಪಡೆಯಬೇಕಿದೆ. ಆದರೆ, ಈ ಸಹಭಾಗಿತ್ವವು ಮನುಕುಲಕ್ಕೆ ನೆರವಾಗಲಿದೆ. ಭೂಮಿಯ ಮೇಲಿನ ಬದುಕನ್ನು ಇನ್ನಷ್ಟು ಹಸನುಗೊಳಸಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸೋಮವಾರ ನವದೆಹಲಿಯಲ್ಲಿ ನಾಸಾ ಮತ್ತು ಇಸ್ರೊ ಸಹಭಾಗಿತ್ವ ಸೇರಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಎರಡೂ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ದತ್ತಾಂಶ ಸಂಗ್ರಹಣೆಗೆ ಪೂರಕವಾದ 'ನಾಸಾ-ಇಸ್ರೊ ಸಿಂಥೆಟಿಕ್ ಅಪೆರ್ಚರ್ ರಾಡಾರ್' ಉಡಾವಣೆಗೂ ಸಿದ್ಧತೆ ನಡೆಸಿವೆ. ಪ್ರತಿ 12 ದಿನಗಳಿಗೆ ಒಮ್ಮೆ ಇಡೀ ಭೂಮಿಯ ಮೇಲ್ಮದರವನ್ನು ವಿಶ್ಲೇಷಿಸುವುದು. ಲಭ್ಯ ದತ್ತಾಂಶವನ್ನು ಆಧರಿಸಿ ತಾಪಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಿದ್ಧತೆ ನಡೆಸುವುದು ರಾಡಾರ್ ಉಡಾವಣೆಯ ಗುರಿಯಾಗಿದೆ.
ನಿರ್ಣಾಯಕ ಹಾಗೂ ನವೀನ ತಂತ್ರಜ್ಞಾನಗಳಲ್ಲಿ ಸಹಭಾಗಿತ್ವ (ಐಸಿಇಟಿ) ಕುರಿತ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ 2022ರ ಮೇ ತಿಂಗಳಲ್ಲಿ ಚಾಲನೆ ನೀಡಿದ್ದರು.