ಚೆನ್ನೈ: ಜನಗಣತಿಯ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ತಮಿಳುನಾಡು ಸರ್ಕಾರವು, ಬುಧವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಚೆನ್ನೈ: ಜನಗಣತಿಯ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ತಮಿಳುನಾಡು ಸರ್ಕಾರವು, ಬುಧವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಜಾತಿ ಕುರಿತ ದತ್ತಾಂಶ ಸಂಗ್ರಹಿಸುವುದು ಮತ್ತು ಅದರ ಆಧಾರದಲ್ಲಿ ಕಾನೂನು ರೂಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಇರುವ ಮಿತಿ ಹಾಗೂ ಕಾನೂನು ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಚರ್ಚೆಯ ನಂತರ ನಿರ್ಣಯ ಅಂಗೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, 'ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಸಮಾನ ಅವಕಾಶಗಳನ್ನು ಖಾತರಿಪಡಿಸುವ ದಿಸೆಯಲ್ಲಿ ನೀತಿ ರೂಪಿಸಲು ಜಾತಿ ಆಧಾರಿತ ಸಮೀಕ್ಷೆ ಅಗತ್ಯ ಎಂಬುದಾಗಿ ಸದನ ಭಾವಿಸುತ್ತದೆ' ಎಂದರು.
ಲೋಕಸಭಾ ಚುನಾವಣೆಯ ವೇಳೆ 'ಇಂಡಿಯಾ' ಕೂಟದ ಮಿತ್ರಪಕ್ಷಗಳು ಪ್ರಸ್ತಾಪಿಸಿದ ಮುಖ್ಯ ವಿಚಾರಗಳ ಪೈಕಿ ಜಾತಿ ಗಣತಿಯೂ ಒಂದು. ಜನಗಣತಿಯ ಜೊತೆಗೆ ಜಾತಿಯನ್ನೂ ದಾಖಲಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿರೋಧಿ ಕೂಟದ ಬಹುತೇಕ ಎಲ್ಲ ಪಕ್ಷಗಳೂ ಪ್ರತಿಪಾದಿಸಿದ್ದವು.