ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶುಕ್ರವಾರ ಎರಡು ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಭೇಟಿ ನೀಡಿದ್ದಾರೆ.
ಭಾರತದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ವಿದೇಶಿ ನಾಯಕರೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಜೂನ್ 9 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಹಿಂದೂ ಮಹಾಸಾಗರದ ಏಳು ದೇಶಗಳ ನಾಯಕರಲ್ಲಿ ಹಸೀನಾ ಸಹ ಸೇರಿದ್ದರು.
ಪ್ರಧಾನಿ ಮೋದಿಯವರೊಂದಿಗೆ ಹಸೀನಾ ಶನಿವಾರ ಮಾತುಕತೆ ನಡೆಸಲಿದ್ದು, ಹಲವಾರು ವಲಯಗಳಲ್ಲಿ ಸಹಕಾರ ನೀಡುವ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.
ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸುವುದರ ಜೊತೆಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನ್ಖರ್ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಶುಕ್ರವಾರ ಸಂಜೆ ಹಸೀನಾ ಭೇಟಿ ಮಾಡಲಿದ್ದಾರೆ. ಬಾಂಗ್ಲಾ ಭದ್ರತೆ, ವ್ಯಾಪಾರ, ವಾಣಿಜ್ಯ, ಇಂಧನ, ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಕಡಲ ವ್ಯವಹಾರದ ಕ್ಷೇತ್ರಗಳಿಗೆ ಸಹಕಾರ ವಿಸ್ತರಿಸುವ ಸಲುವಾಗಿ ಈ ಮಾತುಕತೆಗಳು ನಡೆಯುತ್ತವೆ ಎನ್ನಲಾಗಿದೆ.
ಬಾಂಗ್ಲಾ ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಅತಿದೊಡ್ಡ ರಫ್ತು ತಾಣವಾಗಿದೆ. 2022-23 ರಲ್ಲಿ ಒಟ್ಟು ದ್ವಿಪಕ್ಷೀಯ ವ್ಯಾಪಾರವು 15.9 ಶತಕೋಟಿ ಯುಎಸ್ಡಿ ಆಗಿದೆ ಎಂದು ವರದಿಯಾಗಿದೆ.