ನವದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಇಲ್ಲಿನ ನ್ಯಾಯಾಲಯವೊಂದು ಜೂನ್ 5ಕ್ಕೆ ಕಾಯ್ದಿರಿಸಿದೆ.
ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ವಿಸ್ತರಣೆಗೆ ಸಂಬಂಧಿಸಿದ್ದಲ್ಲ; ಬದಲಿಗೆ, ಇದು ವೈದ್ಯಕೀಯ ಕಾರಣಗಳಿಗೆ ಮಧ್ಯಂತರ ಜಾಮೀನು ನೀಡುವಂತೆ ಕೋರುತ್ತಿದೆ ಎಂದು ಹೇಳಿದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಆದೇಶ ಕಾಯ್ದಿರಿಸಿದರು.
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಈ ಅವಧಿಯಲ್ಲಿ ಕೇಜ್ರಿವಾಲ್ ಅವರು ಉತ್ತರ ಪ್ರದೇಶ, ಪಂಜಾಬ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಪ್ರಚಾರ ನಡೆಸಿದ್ದಾರೆ.
ಮಧ್ಯಂತರ ಜಾಮೀನು ಕುರಿತ ಆದೇಶವನ್ನು ಶನಿವಾರವೇ ಪ್ರಕಟಿಸಬೇಕು ಎಂದು ಕೇಜ್ರಿವಾಲ್ ಪರ ವಕೀಲರು ನ್ಯಾಯಾಧೀಶರನ್ನು ಕೋರಿದರು. ಆದರೆ ಪರಿಶೀಲಿಸಬೇಕಿರುವ ದಾಖಲೆಗಳು ಹಲವು ಇವೆ ಎಂದು ನ್ಯಾಯಾಧೀಶರು ಈ ಕೋರಿಕೆಯನ್ನು ಪುರಸ್ಕರಿಸಲಿಲ್ಲ.
ಇ.ಡಿ. ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಮಧ್ಯಂತರ ಜಾಮೀನು ಅವಧಿಯುದ್ದಕ್ಕೂ ಕೇಜ್ರಿವಾಲ್ ಅವರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈಗ ಅವರು ಇದ್ದಕ್ಕಿದ್ದಂತೆ ತಮಗೆ ಹುಷಾರಿಲ್ಲ ಎನ್ನುತ್ತಿದ್ದಾರೆ. ಆರೋಗ್ಯದ ವಿಚಾರವಾಗಿ ಕೇಜ್ರಿವಾಲ್ ಸತ್ಯವನ್ನು ಮುಚ್ಚಿಟ್ಟು, ತಪ್ಪು ಹೇಳಿಕೆ ನೀಡಿದ್ದಾರೆ' ಎಂದರು.
ಕೇಜ್ರಿವಾಲ್ ಅವರಿಗೆ ಹುಷಾರಿಲ್ಲ, ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಅವರ ಪರ ವಕೀಲರು ಹೇಳಿದರು.
'ತಮ್ಮ ಆರೋಗ್ಯ ಸಮಸ್ಯೆ ಗಂಭೀರವಾಗಿದೆ ಎಂದು ಹೇಳುತ್ತಿರುವ ವ್ಯಕ್ತಿಯ ನಡತೆಯನ್ನು ಗಮನಿಸಿ. ಬಿಡುಗಡೆ ಆದಾಗಿನಿಂದಲೂ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ತಾಸುಗಟ್ಟಲೆ ಪ್ರಚಾರ ನಡೆಸಿದ್ದಾರೆ. ಆಗ ಅವರ ಆರೋಗ್ಯಕ್ಕೆ ಏನೂ ಆಗಿರಲಿಲ್ಲ' ಎಂದು ಇ.ಡಿ. ಹೇಳಿತು.
ವೈದ್ಯಕೀಯ ಪರೀಕ್ಷೆಯನ್ನು ವಿಳಂಬಗೊಳಿಸುವ ಮೂಲಕ ಕೋರ್ಟ್‌ಗೆ ವಂಚಿಸುವ ಉದ್ದೇಶವನ್ನು ಕೇಜ್ರಿವಾಲ್ ಹೊಂದಿದ್ದಾರೆ ಎಂದು ಇ.ಡಿ ಆರೋಪಿಸಿತು. 'ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯ ಇದ್ದಲ್ಲಿ ಅವುಗಳನ್ನು ಜೈಲಿನಲ್ಲಿ ಒದಗಿಸಲಾಗುವುದು. ಅಗತ್ಯ ಎದುರಾದರೆ ಅವರನ್ನು ಏಮ್ಸ್ ಅಥವಾ ಬೇರೆ ಯಾವುದೇ ಆಸ್ಪತ್ರೆಗೆ ಕರೆದೊಯ್ಯಲಾಗುವುದು' ಎಂದು ಕೂಡ ಹೇಳಿತು.
'ತಾವು ಸತ್ತುಹೋಗಬಹುದು, ಕಿಡ್ನಿ ವಿಫಲವಾಗಬಹುದು ಎಂದು ಟಿ.ವಿ. ಮೂಲಕ ಹೇಳುವ ವ್ಯಕ್ತಿಯು ಮೇ 25ರಿಂದ ಕನಿಷ್ಠ ಪರೀಕ್ಷೆಗಳಿಗೂ ಒಳಗಾಗಲಿಲ್ಲ. ಇಡೀ ವ್ಯವಸ್ಥೆಯ ಮೇಲೆ ಈ ರೀತಿ ಮೋಜಿನ ಸವಾರಿ ಮಾಡುವಂತಿಲ್ಲ. ಅರ್ಜಿದಾರರು ಇಲ್ಲಿ ವ್ಯವಸ್ಥೆಯ ಜೊತೆ ಆಟವಾಡುತ್ತಿದ್ದಾರೆ' ಎಂದೂ ಇ.ಡಿ. ಹೇಳಿತು.
ಭಾನುವಾರ ಜೈಲಿಗೆ
ನವದೆಹಲಿ: ಮಧ್ಯಂತರ ಜಾಮೀನು ವಿಚಾರವಾಗಿ ನ್ಯಾಯಾಲಯ ಯಾವುದೇ ಆದೇಶ ನೀಡದ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಹಾರ್ ಜೈಲಿಗೆ ಭಾನುವಾರ ಮರಳಬೇಕಿದೆ.
ಸುಪ್ರೀಂ ಕೋರ್ಟ್ ಮೇ 10ರಂದು ನೀಡಿರುವ ಆದೇಶದ ಅನ್ವಯ, ಕೇಜ್ರಿವಾಲ್ ಅವರು ಜೂನ್ 2ರಂದು ಶರಣಾಗಬೇಕಿದೆ. ಅವರಿಗೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಮಧ್ಯಂತರ ಜಾಮೀನು ನೀಡಲಾಗಿತ್ತು.