ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ನಡೆಸಿದ ಉತ್ಖನನದ ವೇಳೆ 'ಶೇಷಶಾಯಿ ವಿಷ್ಣು' ವಿಗ್ರಹ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಲಖುಜಿ ಜಾಧವರಾವ್ ಮಹಾರಾಜ್ ಅವರ ಛತ್ರಿ (ಸಭಾಮಂಟಪ)ವನ್ನು ಅನ್ವೇಶಿಸುವಾಗ ಶಿಲ್ಪ ಪತ್ತೆಯಾಗಿದೆ ಎಂದು ನಾಗ್ಪುರದ ಪುರಾತತ್ವಶಾಸ್ತ್ರಜ್ಞ ಅರುಣ್ ಮಲಿಕ್ ಪಿಟಿಐಗೆ ತಿಳಿಸಿದ್ದಾರೆ.
ಸಭಾಮಂಟಪದ ಪತ್ತೆಗೆ ಉತ್ಖನನದ ವೇಳೆ ಆಳವಾಗಿ ಪರಿಶೀಲನೆ ನಡೆಸಿದಾಗ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹ ಪತ್ತೆಯಾಗಿದೆ, ನಂತರ ಶೇಷಶಾಯಿ ವಿಷ್ಣುವಿನ (ಮಲಗಿದ ರೂಪದಲ್ಲಿರುವ) ಬೃಹತ್ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹ 1.70 ಮೀಟರ್ ಉದ್ದ ಮತ್ತು 1 ಮೀಟರ್ ಎತ್ತರವಿದ್ದು, ತಳಹದಿಯ ಅಗಲವು 30 ಸೆಂಟಿಮೀಟರ್ ಇರಬಹುದು' ಎಂದು ಮಲಿಕ್ ಮಾಹಿತಿ ನೀಡಿದ್ದಾರೆ.
'ಈ ಶಿಲ್ಪವು ಕ್ಲೋರೈಟ್ ಶಿಸ್ಟ್ ಶಿಲೆಯಿಂದ ಮಾಡಲ್ಪಟ್ಟಿದೆ. ಈ ರೀತಿಯ ಶಿಲ್ಪಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೊಯ್ಸಳು ತಯಾರಿಸುತ್ತಿದ್ದರು. ಇದರಲ್ಲಿ ವಿಷ್ಣು, ಶೇಷ ನಾಗನ ಮೇಲೆ ಮಲಗಿರುವ ಮತ್ತು ಲಕ್ಷ್ಮಿ ದೇವಿಯು ಕುಳಿತುಕೊಂಡು ವಿಷ್ಣುವಿನ ಪಾದಗಳನ್ನು ಒತ್ತುತ್ತಿರುವ ದೃಶ್ಯವಿದೆ. ವಿಗ್ರಹದ ಸುತ್ತಲೂ ವಿಷ್ಣು ದಶಾವತಾರ, ಸಮುದ್ರಮಂಥನವನ್ನು ಚಿತ್ರಿಸಲಾಗಿದೆ. ಸಮುದ್ರಮಂಥನದ ಅಶ್ವ, ಐರಾವತ ಮುಂತಾದವುಗಳೂ ವಿಗ್ರಹದ ಮೇಲೆ ಕಾಣಸಿಗುತ್ತವೆ' ಎಂದು ವಿವರಿಸಿದ್ದಾರೆ.