ತಿರುವನಂಪುರಂ: ಈಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡು ಹಾಗೂ ಉತ್ತರಪ್ರದೇಶದ ರಾಯ್ಬರೇಲಿಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ಕ್ಷೇತ್ರಗಳಲ್ಲೂ ಭರ್ಜರಿ ಜಯಗಳಿಸಿದ್ದರು. ಇದೀಗ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿಗಾಗಿ ವಯನಾಡು ತೊರೆಯಲಿದ್ದು, ರಾಯಬರೇಲಿಯ ಸಂಸದರಾಗಿ ಉಳಿಯಲಿದ್ದಾರೆ.
ಇತ್ತ ಪ್ರಿಯಾಂಕ ಗಾಂಧಿ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ ನಾಯಕ, ತಿರುವನಂಪುರಂ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರಿಯಾಂಕ ಗಾಂಧಿ ಅವರು ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾದರೆ ವಿರೋಧ ಪಕ್ಷದ ಪರ ಮಾತನಾಡಲು ಸಂಸತ್ತಿನಲ್ಲಿ ಒಬ್ಬ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಅವರು ಅತ್ಯಂತ ಪರಿಣಾಮಕಾರಿ ವಾಗ್ಮಿಯಾಗಿದ್ದರು ಮತ್ತು ಅವರು ಕೇರಳದಿಂದ ಚುನಾವಣಾ ರಾಜಕೀಯ ಪ್ರವೇಶಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.
ರಾಹುಲ್ ಗಾಂಧಿ ಅವರು ರಾಯ್ಬರೇಲಿಯನ್ನು ಉಳಿಸಿಕೊಳ್ಳುವ ಮೂಲಕ ವಯನಾಡನ್ನು ತಮ್ಮ ಸಹೋದರಿಗೆ ಹಸ್ತಾಂತರಿಸುವುದು ಉತ್ತಮ ನಡೆಯಾಗಿದೆ. ನನ್ನ ಪ್ರಕಾರ ಪ್ರಿಯಾಂಕ ಗಾಂಧಿ ಅವರು ವಾರಣಾಸಿ ಸ್ಪರ್ಧಿಸಿದ್ದರೆ ಇನ್ನೂ ರೋಚಕವಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ಮಾತನಾಡುತ್ತಿರುವ ರೀತಿ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಕಾಂಗ್ರೆಸ್ಗೆ ಹೆಚ್ಚು ಸಹಕಾರಿಯಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.