ಕಾಸರಗೋಡು: ಬದರಿನಾಥದಿಂದ ಶಬರಿಮಲೆಗೆ ಯಾತ್ರೆ ಹೊರಟಿರುವ ಯುವಕರು ಶಬರಿಮಲೆ ತಲುಪಿದ್ದಾರೆ. ಕಾಸರಗೋಡು ಮೂಲದ ಸನತ್ ಕುಮಾರ್ ಮತ್ತು ಸಂಪತ್ ಕುಮಾರ್ ಬದರಿನಾಥದಿಂದ ಶಬರಿಮಲೆಗೆ ತಲುಪಿದ ಸಾಧಕ ವ್ರತಧಾರಿಗಳು.
ಭಾರತದ ವಿವಿಧ ತೀರ್ಥ ಸ್ಥಳಗಳಿಗೆ ಭೇಟಿ ನೀಡಿ ಏಳು ತಿಂಗಳ ನಂತರ ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆ ತಲುಪಿದರು.
ವಿಷು ಸಂಕ್ರಾಂತಿಯ ದಿನದಂದು ಕಾಸರಗೋಡು ಅಯ್ಯಪ್ಪ ಭಜನಾ ಮಂದಿರದಿಂದ ಯುವಕರು ವ್ರತಧಾರಿಗಳಾಗಿ ಅಯ್ಯಪ್ಪ ಮಾಲೆಧರಿಸಿ ತೆರಳಿದ್ದರು. ಸನತ್ ಕುಮಾರ್ ಮತ್ತು ಸಂಪತ್ ಕುಮಾರ್ ತಮ್ಮ ಪೋಷಕರು ಮತ್ತು ಶಿಕ್ಷಕರ ಆಶೀರ್ವಾದದೊಂದಿಗೆ ಬದರಿನಾಥಕ್ಕೆ ತೆರಳಿದರು. ಅವರು ಬದರಿನಾಥ ದೇವಸ್ಥಾನದ ಬುಡದಲ್ಲಿ ವ್ರತಹಿಡಿದು(ಅಯ್ಯಪ್ಪ ಮಾಲೆ ಧರಿಸಿ)ಪ್ರಯಾಣ ಆರಂಭಿಸಿದ್ದರು.
ಬದರಿನಾಥ ದೇಗುಲದ ಮುಂದೆ ತೆಂಗಿನಕಾಯಿ ಒಡೆಯುವ ಮೂಲಕ ಶಬರಿಮಲೆ ಯಾತ್ರೆ ಆರಂಭವಾಯಿತು. ಯುವಕರು ಕಾಲ್ನಡಿಗೆಯಲ್ಲಿ ಶಬರಿಮಲೆ ತಲುಪಿದರು. ದಿನಕ್ಕೆ ಕನಿಷ್ಠ 25 ಕಿಲೋಮೀಟರ್ ನಡೆಯಲು ಸಾಧ್ಯವಾಗಿದೆ ಎಂದಿದ್ದಾರೆ. ಕುಮ್ಮನಂ ರಾಜಶೇಖರನ್ ಮತ್ತಿತರ ಗಣ್ಯರು ಯುವಕರ ಸಾಹಸಕ್ಕೆ ಶುಭಹಾರೈಸಿದ್ದರು.