ನವದೆಹಲಿ: ದೇಶದ ಅತಿ ದೊಡ್ಡ ಅರೆಸೇನಾ ಪಡೆಯ ಕೆಲವು ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಿಆರ್‌ಪಿಎಫ್ ಡಿಐಜಿಯನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ರಾಷ್ಟ್ರಪತಿಗಳ ಕಚೇರಿಯಿಂದ ಮೇ 30 ರಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಮಾಜಿ ಕ್ರೀಡಾ ಅಧಿಕಾರಿ ಖಾಜನ್ ಸಿಂಗ್ ಅವರನ್ನು "ಸೇವೆಯಿಂದ ವಜಾ"ಗೊಳಿಸಿ ಆದೇಶ ಹೊರಡಿಸಲಾಗಿದೆ.
ಗೃಹ ಸಚಿವಾಲಯ ಮತ್ತು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಅನುಮೋದಿಸಿದ ಎರಡು ಶೋಕಾಸ್ ನೋಟಿಸ್‌ಗಳನ್ನು ಸಿಆರ್‌ಪಿಎಫ್ ಡಿಐಜಿಗೆ ನೀಡಿದ ನಂತರ ವಜಾಗೊಳಿಸುವ ಅಂತಿಮ ಆದೇಶ ಬಂದಿದೆ.
ನವಿ ಮುಂಬೈನಲ್ಲಿ ನಿಯೋಜಿಸಲಾಗಿದ್ದ ಸಿಂಗ್ ಅವರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಅವು "ಸಂಪೂರ್ಣ ಸುಳ್ಳು" ಮತ್ತು ಅವರ "ಇಮೇಜ್" ಅನ್ನು ಹಾಳುಮಾಡಲು ಮಾಡಲಾಗಿದೆ ಎಂದು ಹೇಳಿದ್ದರು.
ಸಿಆರ್‌ಪಿಎಫ್ ನಡೆಸಿದ ತನಿಖೆಯ ನಂತರ ಲೈಂಗಿಕ ಕಿರುಕುಳ ಆರೋಪಗಳಲ್ಲಿ ಸಿಂಗ್ "ತಪ್ಪಿತಸ್ಥ" ಎಂದು ಕಂಡುಬಂದ ನಂತರ ಗೃಹ ಸಚಿವಾಲಯವು ಯುಪಿಎಸ್‌ಸಿಯ ಶಿಫಾರಸುಗಳನ್ನು ಅಂಗೀಕರಿಸಿದ ನಂತರ ಅವರ ವಿರುದ್ಧ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿತ್ತು.
ಸಿಆರ್‌ಪಿಎಫ್ ಪ್ರಧಾನ ಕಛೇರಿಯು, ಈ ಹಿಂದೆ ಆಂತರಿಕ ಸಮಿತಿ ಸಿದ್ಧಪಡಿಸಿದ್ದ ತನಿಖಾ ವರದಿಯನ್ನು ಸ್ವೀಕರಿಸಿತ್ತು ಮತ್ತು ಸೂಕ್ತ ಶಿಸ್ತು ಕ್ರಮಕ್ಕಾಗಿ ಯುಪಿಎಸ್‌ಸಿ ಮತ್ತು ಗೃಹ ಸಚಿವಾಲಯಕ್ಕೆ ರವಾನಿಸಿತ್ತು.