ನವದೆಹಲಿ: ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚನೆಯಾಗುತ್ತಿರುವ ಬೆನ್ನಲ್ಲೇ ವಿಪಕ್ಷ ನಾಯಕನ ಆಯ್ಕೆಗೆ ಕಾಂಗ್ರೆಸ್ ನಲ್ಲಿ ಚರ್ಚೆಗಳು ಆರಂಭವಾಗಿವೆ.
ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಸಲು ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಸಿಡಬ್ಲ್ಯುಸಿ ಸಭೆಯ ಬಳಿಕ ಮಾತನಾಡಿರುವ ಕಾಂಗ್ರೆಸ್ ಸಂಸದರಾದ ಕುಮಾರಿ ಸೆಲ್ಜಾ, ರಾಹುಲ್ ಗಾಂಧಿ ವಿಪಕ್ಷದ ನಾಯಕರಾಗಬೇಕೆಂಬುದು ಸಿಡಬ್ಲ್ಯುಸಿಯ ಇಚ್ಛೆಯಾಗಿದೆ ಎಂದು ಹೇಳಿದ್ದಾರೆ. ಕೆಸಿ ವೇಣುಗೋಪಾಲ್ ಮಾತನಾಡಿ, ವಿಪಕ್ಷ ನಾಯಕರಾಗುವಂತೆ ಸಿಡಬ್ಲ್ಯುಸಿ ಸಭೆ ಸರ್ವಾನುಮತದಿಂದ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿದೆ. ಸಿಡಬ್ಲ್ಯುಸಿ ನಿರ್ಣಯ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಯವರ ಪ್ರಯತ್ನಗಳನ್ನು ಶ್ಲಾಘಿಸಿದೆ.
"ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿನ್ಯಾಸಗೊಳಿಸಿ, ಮುನ್ನಡೆಸಿದ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ನಮ್ಮ ರಾಷ್ಟ್ರದ ರಾಜಕೀಯದಲ್ಲಿ ಐತಿಹಾಸಿಕ ತಿರುವುಗಳು ಮತ್ತು ಭರವಸೆಯನ್ನು ಹುಟ್ಟುಹಾಕಿದವು. ಮತ್ತು ನಮ್ಮ ಲಕ್ಷಾಂತರ ಕಾರ್ಯಕರ್ತರು ಮತ್ತು ನಮ್ಮ ಕೋಟಿಗಟ್ಟಲೆ ಮತದಾರರಲ್ಲಿ ವಿಶ್ವಾ ಹೆಚ್ಚಿಸಿತು" ಎಂದು ವೇಣುಗೋಪಾಲ್ ಹೇಳಿದ್ದಾರೆ.