ಬುಧವಾರ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕಿತ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ಮೃತ ಉಗ್ರರಿದ್ದ ಪ್ರದೇಶದಿಂದ ಸೇನಾಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಎರಡು M4 ಕಾರ್ಬೈನ್‌ಗಳು ಮತ್ತು AK-ಸರಣಿ ಅಸಾಲ್ಟ್ ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈ ಜಂಟಿ ಎನ್ಕೌಂಟರ್ ನಲ್ಲಿ ಸ್ಥಳೀಯ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಭಾಗಿಯಾಗಿದ್ದರು.
ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಸೇನೆ ಶಂಕಿತ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಉಗ್ರರು ಸೇನಾಪಡೆಗಳತ್ತ ಗುಂಡಿನ ಸುರಿಮಳೆ ಗೈದಿದ್ದು, ಸೇನೆ ಕೂಡ ತಿರುಗೇಟು ನೀಡಿದೆ. ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಘಟನಾ ಪ್ರದೇಶದಲ್ಲಿ ಸೇನೆ ತೀವ್ರ ಶೋಧ ನಡೆಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮಣ್ಣಿನ ಮನೆಯಲ್ಲಿ ಅಡಗಿದ್ದ ಉಗ್ರರು
ಶಂಕಿತ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಮುಂದಾದ ಸೇನೆ ಕುಗ್ರಾಮದಲ್ಲಿ ತೀವ್ರ ಶೋಧ ನಡೆಸಿತ್ತು. ಈ ವೇಳೆ ಸಿನೂ ಪಂಚಾಯತ್‌ನ ಹಳ್ಳಿಯೊಂದರ ಇಳಿಜಾರಿನಲ್ಲಿ "ಧೋಕ್" (ಮಣ್ಣಿನ ಮನೆ) ಯಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಸೇನೆಯನ್ನು ಗುರಿಯಾಗಿಸಿಕೊಂಡು ಗುಂಡಿನ ಸುರಿಮಳೆಗೈದರು.
ಸೇನೆ ಕೂಡ ಪ್ರತಿ ದಾಳಿ ನಡೆಸಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿತು. ಈ ವೇಳೆ ಅಲರ್ಟ್ ಆದ ಇತರೆ ಇಬ್ಬರು ಉಗ್ರರು ಅಲ್ಲಿಂದ ಕಾಲ್ಕಿತ್ತರು. ಕೂಡಲೇ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಅಡಗಿದ್ದ ಇಬ್ಬರು ಉಗ್ರರು ಸೇನೆಯನ್ನು ಗುರಿಯಾಗಿಸಿಕೊಂಡು ತೀವ್ರ ಗುಂಡಿನ ದಾಳಿ ನಡೆಸಿದರು.
ಇತ್ತೀಚೆಗಷ್ಟೇ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನಿ ಭಯೋತ್ಪಾದಕರು
ದೋಡಾ ಜಿಲ್ಲೆಯಲ್ಲಿ ಇತ್ತೀಚೆಗೆ ನಾಲ್ಕು ಮಂದಿ ಪಾಕಿಸ್ತಾನಿ ಭಯೋತ್ಪಾದಕರು ಸ್ಥಳೀಯರ ನೆರವಿನಿಂದ ಒಳ ನುಸುಳಿರುವುದನ್ನು ಭಾರತೀಯ ಸೇನೆ ಮನಗಂಡಿತ್ತು. ಈ ವೇಳೆ ತೀವ್ರ ಶೋಧದ ಹೊರತಾಗಿಯೂ ಉಗ್ರರ ಹೆಡೆಮುರಿ ಕಟ್ಟಲು ಸೇನೆ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತ್ತು.
ಬಳಿಕ ಉಗ್ರರು ದೋಡಾ ಜಿಲ್ಲೆಯ ಅರಣ್ಯ ಪ್ರದೇಶ ಸಮೀಪದ ಕುಗ್ರಾಮದಲ್ಲಿ ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.
ಜೂನ್ 9 ರಂದು, ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಾಹನದ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಂಬತ್ತು ಜನರು ಸಾವಿಗೀಡಾಗಿ 41 ಮಂದಿ ಗಾಯಗೊಂಡಿದ್ದರು.