ದೇಶದ 542 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ 8,360 ಅಭ್ಯರ್ಥಿಗಳ ಭವಿಷ್ಯ ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದೆ.
ಮುನ್ನಡೆಯ ಹಾದಿಗೆ ಮೋದಿ
ಆರಂಭಿಕ ಹಿನ್ನಡೆ ಅನುಭವಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿ ಕ್ಷೇತ್ರದಲ್ಲಿ ಮುನ್ನಡೆಯ ಹಾದಿಗೆ ಹೊರಳಿದ್ದಾರೆ. ಕಾಂಗ್ರೆಸ್‌ನ ಅಜಯ್ ರಾಯ್ ಎದುರು 21,629 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಂಜಾಬ್: ಜೈಲಿನಲ್ಲಿರುವ ಖಾಲಿಸ್ತಾನಿ ನಾಯಕನಿಗೆ ಮುನ್ನಡೆ
ಖಾಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್, ಖದೂರ್ ಸಾಹಿಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕುಲ್ಬೀರ್ ಸಿಂಗ್ ಝರಾ ಎದುರು 30,987 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಬಿಜೆಪಿಯ ಸುಶೀಲ್ ರಿಂಕು ಎದುರು ಜಲಂಧರ್‌ನಲ್ಲಿ 38,642 ಮತಗಳ ಮುನ್ನಡೆ ಹೊಂದಿದ್ದಾರೆ.
10.30ರ ಮಾಹಿತಿ
ಛಿಂದ್ವಾರದಲ್ಲಿ ಕಮಲನಾಥ್ ಪುತ್ರನಿಗೆ ಹಿನ್ನಡೆ
ದೇಶದ ಗಮನ ಸೆಳೆದಿರುವ ಮಧ್ಯಪ್ರದೇಶದ ಛಿಂದ್ವಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ನಕುಲ್ ನಾಥ್ ಹಿನ್ನಡೆ ಅನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಕುಲ್‌ಗೆ ಬಿಜೆಪಿಯ ವಿವೇಕ್ ಬಂಟಿ ಸಾಹು ಎದುರು 3,806 ಮತಗಳ ಹಿನ್ನಡೆ ಎದುರಾಗಿದೆ.
ಕಮಲನಾಥ್ ಹಾಗೂ ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿರುವ ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಚುನಾವಣಾ ಪೂರ್ವದಲ್ಲಿ ಭಾರಿ ಕಸರತ್ತು ನಡೆಸಿತ್ತು.
ಶಶಿ ತರೂರ್‌ಗೆ ಭಾರಿ ಪೈಪೋಟಿ
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾರಿ ಪೈಪೋಟಿಯೊಡ್ಡಿದ್ದಾರೆ. ಇಬ್ಬರ ನಡುವೆ ಅತ್ಯಲ್ಪ ಮತಗಳ ಅಂತರದ ಹಾವು-ಏಣಿ ಆಟ ಆರಂಭದಿಂದಲೂ ನಡೆಯುತ್ತಿದೆ.
ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ ತರೂರ್ ಅವರು 2,000 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಜಿದ್ದಾಜಿದ್ದಿ
80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇದಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಸದ್ಯ 70 ಕ್ಷೇತ್ರಗಳ ಅಂಕಿ-ಅಂಶ ಲಭ್ಯವಾಗಿದ್ದು, ಈ ಪೈಕಿ ಎನ್‌ಡಿಎ ಬಣದ ಬಿಜೆಪಿ 34 ಕಡೆ ಮೇಲುಗೈ ಸಾಧಿಸುತ್ತಿದೆ. ಇಂಡಿಯಾ ಕೂಟದ ಎಸ್‌ಪಿ ಹಾಗೂ ಕಾಂಗ್ರೆಸ್ ಕ್ರಮವಾಗಿ 30 ಮತ್ತು 6 ಸ್ಥಾನಗಳಲ್ಲಿ ಮುನ್ನಡೆ ಗಳಿಸುತ್ತಿವೆ.
ಒಡಿಶಾದಲ್ಲಿ ಬಿಜೆಡಿ - ಬಿಜೆಪಿ ಪೈಪೋಟಿ
ರಾಹುಲ್‌ಗೆ ಮುನ್ನಡೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಮುನ್ನಡೆಯ ಕಾಯ್ದುಕೊಂಡಿದ್ದಾರೆ. ಹತ್ತಿರದ ಪ್ರತಿಸ್ಪರ್ಧಿ ಎದುರು 18,000 ಮತಗಳ ಅಂತರ ಹೊಂದಿದ್ದಾರೆ.
ಸಿಪಿಐ ನಾಯಕ ಅಣ್ಣೈ ರಾಜಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ರಾಹುಲ್‌ಗೆ ಪೈಪೋಟಿ ನೀಡುತ್ತಿದ್ದಾರೆ.
ಆರಂಭಿಕ ಹಂತ; ಪ್ರಮುಖರಿಗೆ ಹಿನ್ನಡೆ
ನರೇಂದ್ರ ಮೋದಿ (ಬಿಜೆಪಿ): ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಎದುರು 6,223 ಹಿನ್ನಡೆ
ಸ್ಮೃತಿ ಇರಾನಿ (ಬಿಜೆಪಿ): ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಎದುರು 3,916 ಮತಗಳ ಹಿನ್ನಡೆ
ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್ -ಎನ್‌ಸಿ): ಬಾರಾಮುಲ್ಲಾದಲ್ಲಿ ಪಕ್ಷೇತರ ಅಭ್ಯರ್ಥಿ ಶೇಖ್ ಅಬ್ದುಲ್ ರಶೀದ್ ಎದುರು 2,600 ಮತಗಳ ಹಿನ್ನಡೆ
ಮೆಹಬೂಬಾ ಮುಫ್ತಿ (ಪಿಡಿಪಿ): ಅನಂತನಾಗ್ -ರಾಜೌರಿ ಕ್ಷೇತ್ರದಲ್ಲಿ ಎನ್‌ಸಿ ಅಭ್ಯರ್ಥಿ ಮಿಯಾನ್ ಅಲ್ತಾಫ್ ಅಹ್ಮದ್ ಎದುರು 26,000 ಮತಗಳ ಹಿನ್ನಡೆ
ಮನೇಕಾ ಗಾಂಧಿ: ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಎಸ್‌ಪಿ ಅಭ್ಯರ್ಥಿ ರಾಮ್ ಭೌಲ್ ನಿಶಾದ್ ಎದುರು 1,872 ಮತಗಳ ಹಿನ್ನಡೆ
ಅರ್ಜುನ್ ರಾಮ್ ಮೇಘ್ವಾಲ್: ರಾಜಸ್ಥಾನದ ಬಿಕಾನೇರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೋವಿಮದ್ ರಾಮ್ ಮೇಘ್ವಾಲ್ ವಿರುದ್ಧ 5,222 ಮತಗಳ ಹಿನ್ನಡೆ
200ರ ಗಡಿ ದಾಟಿದ 'ಇಂಡಿಯಾ'
ಆರಂಭಿಕ ಹಂತದ ಮತ ಎಣಿಕೆ ಮಾಹಿತಿ ಪ್ರಕಾರ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಅಭ್ಯರ್ಥಿಗಳು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ತಮಿಳುನಾಡು, ಕೇರಳ ಮತ್ತು ಪಂಜಾಬ್‌ನಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.
ಸ್ಮೃತಿ ಇರಾನಿಗೆ ಹಿನ್ನಡೆ
ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಎದುರು ಹಿನ್ನಡೆ ಅನುಭವಿಸಿದ್ದಾರೆ.
ಮುಫ್ತಿ, ಅಬ್ದುಲ್ಲಾಗೆ ಹಿನ್ನಡೆ
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಅನಂತನಾಗ್- ರಾಜೌರಿ ಕ್ಷೇತ್ರಿಂದ ಕಣಕ್ಕಿಳಿದಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಾಗೂ ಬಾರಾಮುಲ್ಲಾದಲ್ಲಿ ಸ್ಪರ್ಧಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹಿನ್ನಡೆ ಅನುಭವಿಸಿದ್ದಾರೆ.
ಆರಂಭಿಕ ಹಂತ; ಅಮಿತ್ ಶಾ, ರಾಹುಲ್‌ಗೆ ಮುನ್ನಡೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕನೌಜ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ ಗಾಂಧಿನಗರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ (ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ) ಮುನ್ನಡೆ ಗಳಿಸಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿ ನಾಗಾಲೋಟ
26 ಲೋಕಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಇಲ್ಲಿನ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 25ರಲ್ಲಿ 20 ಕಡೆ ಮುನ್ನಡೆ ಕಾಯ್ದುಕೊಂಡಿದೆ.
ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಮಹಾರಾಷ್ಟ್ರದಲ್ಲೂ ಬಿಜೆಪಿ ಮೇಲುಗೈ
ಮಹಾರಾಷ್ಟ್ರ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿ, ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 17 ಕಡೆ ಮುಂದೆ ಇದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಎನ್‌ಸಿಪಿ (ಅಜಿತ್ ಪವಾರ್ ಬಣ) 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಮಹಾ ವಿಕಾಸ ಆಘಾಡಿ ಮೈತ್ರಿಕೂಟದಲ್ಲಿರುವ ಉದ್ಧವ್ ಠಾಕ್ರೆ ಬಣದ ಶಿವಸೇನಾ 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ, ಕಾಂಗ್ರೆಸ್ 7, ಎನ್‌ಸಿಬಿ (ಶರದ್ ಪವಾರ್ ಬಣ) 2 ಕಡೆ ಮುನ್ನಡೆ ಹೊಂದಿದೆ.
ಸಿಕ್ಕಿಂನಲ್ಲಿ ಎಸ್‌ಕೆಎಂ ಮುನ್ನಡೆ
ಎಸ್‌ಕೆಎಂ ನಾಯಕ ಪ್ರೇಮ್ ಸಿಂಗ್ ತಮಾಂಗ್
ಸಿಕ್ಕಿಂನಲ್ಲಿರುವ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಸಾಧಿಸಿದೆ.
ಇಲ್ಲಿನ ವಿಧಾನಸಭಾ ಚುನಾವಣೆ ಫಲಿತಾಂಶ ಮೊನ್ನೆಯಷ್ಟೇ (ಜೂ. 2) ಪ್ರಕಟವಾಗಿದೆ. 32 ಕ್ಷೇತ್ರಗಳ ಪೈಕಿ 31ರಲ್ಲಿ ಗೆದ್ದು ಅಧಿಕಾರಕ್ಕೇರಿದೆ.
ಚುನಾವಣಾ ಆಯೋಗದ ಮಾಹಿತಿ
ಎನ್‌ಡಿಎಗೆ ಮುನ್ನಡೆ
ಆರಂಭಿಕ ಹಂತದ ಮತ ಎಣಿಕೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎ ಅಭ್ಯರ್ಥಿಗಳು 323 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಬಣದ ಅಭ್ಯರ್ಥಿಗಳು 138 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಪಾರದರ್ಶಕತೆ ಕಾಯ್ದುಕೊಳ್ಳಿ: ಸಿಇಸಿ ರಾಜೀವ್ ಕುಮಾರ್
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
'ಎಲ್ಲ ಕ್ಷೇತ್ರಗಳಲ್ಲೂ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಯಮಾನುಸಾರವಾಗಿ ಮತ್ತು ಪಾರದರ್ಶಕವಾಗಿ ಎಣಿಕೆ ಕಾರ್ಯ ನಡೆಯುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ' ಎಂದು ಮುಖ್ಯ ಚುನಾವಣಾ ಆಯುಕ ರಾಜೀವ್ ಕುಮಾರ್ ತಿಳಿಸಿದ್ದಾರೆ.
12 ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ 'ಹ್ಯಾಟ್ರಿಕ್' ಗೆಲುವಿನ ವಿಶ್ವಾಸದಲ್ಲಿದ್ದರೆ, ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.