ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 350ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ. ಬಿಜೆಪಿ ಗಳಿಕೆ 300ರ ಸನಿಹಕ್ಕೆ ಬಂದು ನಿಂತಿದೆ. ಮತಗಟ್ಟೆ ಸಮೀಕ್ಷೆಗಳನ್ನು ಮೀರಿ ಇಂಡಿಯಾ ಮೈತ್ರಿಕೂಟ 220ಕ್ಕೂ ಅಧಿಕ ಸ್ಥಾನ ಗಳಿಸಿದೆ.
ಮೂರು ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ 400ಕ್ಕೂ ಅಧಿಕ ಸೀಟುಗಳು ಬರಲಿವೆ ಎಂದು ಅಂದಾಜಿಸಿದ್ದವು. ಎಲ್ಲಾ ಮತಗಟ್ಟೆಗಳ ಸರಾಸರಿ ಎನ್‌ಡಿಎಗೆ 360ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಅವೆಲ್ಲಾ ತಲೆಕೆಳಗಾಗಿವೆ. 2014 ಹಾಗೂ 2019ರಲ್ಲಿ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ, ಈ ಬಾರಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಬಗ್ಗೆ ಅಂದಾಜಿಸಿದ್ದವು. ಮತಗಟ್ಟೆ ಸಮೀಕ್ಷೆಗಳ ಬಗ್ಗೆ ವಿರೋಧ ಪಕ್ಷಗಳು ಅಪಸ್ವರ ಎತ್ತಿದ್ದವು. ಅವುಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದವು. ಇದೀಗ ಬಂದಿರುವ ಚುನಾವಣೆ ಫಲಿತಾಂಶವು, ಏಜೆನ್ಸಿಗಳು ಮತದಾರನ ಮನದಾಳ ಅರಿಯುವಲ್ಲಿ ವಿಫಲವಾಗಿದ್ದನ್ನು ಕಾಣಬಹುದು.