HEALTH TIPS

Exit Poll: ಈ ಹಿಂದೆ 5 ಬಾರಿ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಹೊಡೆದಿತ್ತು! ಯಾವಾಗ ನೆನಪಿದೆಯೆ?

          ಲೋಕಸಭಾ ಚುನಾವಣೆಯ (Loksabha election-2024) ಅಂತಿಮ ಹಂತದ ಮತದಾನ (voting) ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಏಳು ಹಂತದ ಮತದಾನದ ಫಲಿತಾಂಶ ಹೊರಬೀಳಲಿದೆ. ರಾಜಕೀಯ ನಾಯಕರು (political leaders), ತಜ್ಞರು, ನಾಗರಿಕರು ಸೇರಿದಂತೆ ಎಲ್ಲರ ಗಮನ ಈಗ ಎಕ್ಸಿಟ್ ಪೋಲ್‌ಗಳತ್ತ (Exit Poll) ಇದೆ.

          ಜೂನ್‌ 1ರಂದು ಸಂಜೆ 6.30ರ ಹೊತ್ತಿಗೆ ವಿವಿಧ ಮಾಧ್ಯಮಗಳ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದೆ. ಕಳೆದ ಅನೇಕ ವರ್ಷಗಳಲ್ಲಿ ಎಕ್ಸಿಟ್ ಪೋಲ್‌ಗಳು ಮತದಾರರ ಚಿತ್ತವನ್ನು ಅಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣಾ ಆಯೋಗದ (Election Commission) ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ನಿಖರವಾದ ವಿವರಣೆ ಲಭ್ಯವಾಗುತ್ತದೆ.

ಸಮೀಕ್ಷೆಗಳು ಬಹುತೇಕ ಯಾವಾಗಲೂ ನಿಖರವಾಗಿವೆಯೇ ಇದ್ದರೂ ಕೆಲವು ಬಾರಿ ತಪ್ಪಾಗಿದ್ದೂ ಇದೆ. ತೀವ್ರವಾದ ಪರಿಶೀಲನೆ, ಚರ್ಚೆಯ ಬಳಿಕವೂ ಎಕ್ಸಿಟ್ ಪೋಲ್‌ಗಳು ಯಾವಾಗಲೂ ಅಂತಿಮ ಫಲಿತಾಂಶಗಳನ್ನು ನಿಖರವಾಗಿ ಹೇಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ಐದು ಬಾರಿ ಎಕ್ಸಿಟ್‌ ಪೋಲ್‌ ಭವಿಷ್ಯ ಸುಳ್ಳಾಗಿದೆ. ಈ ಕುರಿತ ಹಿನ್ನೋಟ ಇಲ್ಲಿದೆ.
2004ರ ಲೋಕಸಭಾ ಚುನಾವಣೆ

2004ರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿ, ಆಡಳಿತಾರೂಢ ಬಿಜೆಪಿಯು ‘ಇಂಡಿಯಾ ಶೈನಿಂಗ್’ ಬ್ಯಾನರ್ ಅಡಿಯಲ್ಲಿ ಅವಧಿಪೂರ್ವವೇ ಲೋಕಸಭೆ ಚುನಾವಣೆ ಎದುರಿಸಿತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ನಾಯಕರು ಭಾರಿ ಆತ್ಮವಿಶ್ವಾಸದಿಂದಿದ್ದರು. ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 240ರಿಂದ 250 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಿಜವಾದ ಫಲಿತಾಂಶಗಳು ಬಂದಾಗ ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಎನ್‌ಡಿಎ ಕೇವಲ 181 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು. 218 ಸ್ಥಾನಗಳನ್ನು ಗಳಿಸಿದ ಯುಪಿಎ ಮಿತ್ರ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿತು.

2015ರ ದೆಹಲಿ ಅಸೆಂಬ್ಲಿ ಚುನಾವಣೆ

          2015ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 70ರಲ್ಲಿ 67 ಸ್ಥಾನಗಳನ್ನು ಗಳಿಸಿ ಅಭೂತಪೂರ್ವ ಜಯ ಸಾಧಿಸಿತು. ಆದರೆ ಮತದಾನದ ದಿನದಂದು ನಡೆಸಿದ ಎಕ್ಸಿಟ್ ಪೋಲ್‌ಗಳು ಆಪ್‌ಗೆ ಸ್ಪಷ್ಟ ಬಹುಮತ ಎಂದು ಹೇಳಿತ್ತಾದರೂ, 50ರಷ್ಟು ಸೀಟು ಬರಬಹುದು ಎಂದಿತ್ತು. ಆದರೆ ಆಪ್‌ ಎಲ್ಲರ ನಿರೀಕ್ಷೆಗೂ ಮೀರಿದಷ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ, ಜನರ ತೀರ್ಪನ್ನು ಸ್ಪಷ್ಟವಾಗಿ ಗುರುತಿಸಲು ಎಕ್ಸಿಟ್‌ ಪೋಲ್‌ಗಳು ವಿಫಲವಾಗಿದ್ದವು.

2015ರ ಬಿಹಾರ ವಿಧಾನಸಭಾ ಚುನಾವಣೆ

2015ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ತೀವ್ರ ಪೈಪೋಟಿಯಿಂದ ಕೂಡಿತ್ತು. ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಈ ಮುನ್ಸೂಚನೆಯ ಹೊರತಾಗಿಯೂ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟವು ಭರ್ಜರಿ ಜಯ ಸಾಧಿಸಿತು. ಲಾಲು ಪ್ರಸಾದ್ ಅವರ ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2017

           ನೋಟು ಅಮಾನ್ಯೀಕರಣದ ಅನಂತರ ನಡೆದ 2017ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಗಳು ಭಾರಿ ಕುತೂಹಲ ಮೂಡಿಸಿದ್ದವು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಸರಳ ಬಹುಮತಕ್ಕೂ ಕೆಲವು ಸ್ಥಾನಗಳು ಕೊರತೆ ಆಗಲಿವೆ. ಬಿಜೆಪಿಗೆ ಹೆಚ್ಚೆಂದರೆ 185ರಿಂದ 200 ಸ್ಥಾನಗಳು ಬರಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಎಸ್‌ಪಿ-ಕಾಂಗ್ರೆಸ್‌ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಎಲ್ಲ ಮತಗಟ್ಟೆ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 403 ಸೀಟುಗಳಲ್ಲಿ 312 ಸೀಟುಗಳನ್ನು ಗೆದ್ದುಕೊಂಡಿತು. 2012ರ ಚುನಾವಣೆಯಲ್ಲಿ ಕೇವಲ 47 ಸ್ಥಾನ ಗಳಿಸಿದ್ದ ಬಿಜೆಪಿಗೆ 2017ರಲ್ಲಿ ಭರ್ಜರಿ ಜಯ ಸಾಧಿಸಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ 19 ಸ್ಥಾನ ಗೆದ್ದಿತು. ಎಸ್ಪಿಗೆ ಕೇವಲ 47 ಸೀಟುಗಳು ಸಿಕ್ಕಿದವು. ಕಾಂಗ್ರೆಸ್‌ಗೆ ಕೇವಲ 7 ಸ್ಥಾನಗಳು ಲಭಿಸಿದವು. ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಭಾರಿ ಅಲೆ ಇರುವುದನ್ನು ಗುರುತಿಸುವಲ್ಲಿ ವಿಫವಾದವು.

2014ರ ಲೋಕಸಭಾ ಚುನಾವಣೆ

           2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಆದರೆ ಬಿಜೆಪಿಯೊಂದೇ ಸರಳ ಬಹುಮತಕ್ಕೆ ಅಗತ್ಯವಾದ 272 ಸಂಖ್ಯೆ ಪಡೆಯುವುದಿಲ್ಲ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಟುಡೇಸ್‌ ಚಾಣಕ್ಯ ಸಮೀಕ್ಷೆಯೊಂದು ಮಾತ್ರ ಬಿಜೆಪಿಗೆ 291 ಸೀಟು ಬರಬಹುದು ಎಂದು ಹೇಳಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿಗೆ ಭರ್ಜರಿ 282 ಸೀಟುಗಳು ಲಭಿಸಿದವು. ಎನ್‌ಡಿಎ ಸೀಟುಗಳ ಸಂಖ್ಯೆ 300 ದಾಟಿತು. ಕಾಂಗ್ರೆಸ್ ಕೇವಲ 44 ಸ್ಥಾನಗಳಿಗೆ ಸೀಮಿತವಾಯಿತು. ಬಿಜೆಪಿ ಮತ್ತು ಎನ್‌ಡಿಎಯ ಭಾರಿ ಗೆಲುವಿನ ಸುಳಿವು ಮತಗಟ್ಟೆ ಸಮೀಕ್ಷೆಗಳಿಗೆ ಸಿಕ್ಕಿರಲಿಲ್ಲ. ಹಾಗಾಗಿ ಮತಗಟ್ಟೆ ಸಮೀಕ್ಷೆಗಳು ಎಲ್ಲ ಕಾಲಕ್ಕೂ ಸರಿಯಾಗಿಯೇ ಇರುತ್ತವೆ ಎಂದು ಹೇಳಲಾಗುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries