HEALTH TIPS

G7 Summit | ಮಾತುಕತೆ, ರಾಜತಾಂತ್ರಿಕತೆಯೊಂದೇ ಶಾಂತಿ ಮಾರ್ಗ: ಮೋದಿ ಕಿವಿಮಾತು

 ಬಾರಿ : ಸಂಘರ್ಷ ಶಮನಗೊಳಿಸಿ ಶಾಂತಿ ಸ್ಥಾಪಿಸಲು 'ಮಾತುಕತೆ ಮತ್ತು ರಾಜತಾಂತ್ರಿಕ' ಮಾರ್ಗವೊಂದೇ ಪರಿಹಾರ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ಶುಕ್ರವಾರ ಮತ್ತೊಮ್ಮೆ ಮನವರಿಕೆ ಮಾಡಿದ್ದಾರೆ.

ಉಕ್ರೇನ್‌ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಬೇಕು ಎಂದು ಭಾರತ ಆರಂಭದಿಂದಲೂ ಪ್ರತಿಪಾದಿಸುತ್ತಿದೆ.

ಇಟಲಿಯ ಪುಗ್ಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಜಿ7 ರಾಷ್ಟ್ರಗಳ ಶೃಂಗಸಭೆಯ ನೇಪಥ್ಯದಲ್ಲಿ ಉಭಯ ರಾಷ್ಟ್ರಗಳ ನಾಯಕರು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಉಕ್ರೇನ್ ಸಂಘರ್ಷ ಕೊನೆಗಾಣಿಸಲು ಶಾಂತಿಯುತ ಪರಿಹಾರಕ್ಕಾಗಿ ಭಾರತವು ತನ್ನ ಸಾಮರ್ಥ್ಯ ಬಳಸಿಕೊಂಡು ಎಲ್ಲ ರೀತಿಯ ಪ್ರಯತ್ನ ಮಾಡುವುದನ್ನು ಮುಂದುವರಿಸಲಿದೆ. ಶಾಂತಿಯ ಮಾರ್ಗವನ್ನು ಯಾವಾಗಲೂ ಭಾರತ ಬೆಂಬಲಿಸಲಿದೆ ಎಂದು ಮೋದಿ ಅವರು ಝೆಲೆನ್‌ಸ್ಕಿಯವರಿಗೆ ಭರವಸೆ ನೀಡಿದರು.

ಯಾವುದೇ ಸಮಸ್ಯೆಗಳ ಪರಿಹಾರದಲ್ಲಿ ಮಾನವೀಯ ಕೇಂದ್ರಿತ ನೆಲೆಗಟ್ಟಿನ ವಿಧಾನದ ಮೇಲೆ ಭಾರತ ಬಲವಾದ ನಂಬಿಕೆಯನ್ನು ಹೊಂದಿದೆ ಎಂದೂ ಮೋದಿ ಅವರು ಝೆಲೆನ್‌ಸ್ಕಿಯವರಿಗೆ ತಿಳಿಸಿದರು.

ಉಕ್ರೇನ್‌ನಲ್ಲಿನ ಪರಿಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯ ಕುರಿತು ಉಭಯ ನಾಯಕರು ಇದೇ ವೇಳೆ ವಿಚಾರ ವಿನಿಮಯ ಮಾಡಿಕೊಂಡರು ಎಂದು ಭಾರತದ ವಿದೇಶಾಂಗ ಸಚಿವಾಲಯವೂ ಹೇಳಿದೆ.

'ಉಕ್ರೇನ್ ಅಧ್ಯಕ್ಷರ ಜತೆಗಿನ ಸಭೆ ಅತ್ಯಂತ ಫಲಪ್ರದವಾಗಿತ್ತು' ಎಂದು ಬಣ್ಣಿಸಿದ ಮೋದಿ, ಉಕ್ರೇನ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತ ಉತ್ಸುಕವಾಗಿದೆ ಎಂದು 'ಎಕ್ಸ್'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು.

ಸುನಕ್‌, ಮ್ಯಾಕ್ರನ್‌ ಜತೆ ದ್ವಿಪಕ್ಷೀಯ ಸಭೆ:
ಪ್ರಧಾನಿ ಮೋದಿ ಅವರು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೂ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಮಾತುಕತೆ ವೇಳೆ ಉಭಯ ರಾಷ್ಟ್ರಗಳ ನಡುವೆ ಸೇನೆ, ಪರಮಾಣು, ಬಾಹ್ಯಾಕಾಶ, ಶಿಕ್ಷಣ, ಹವಾಮಾನ ಬದಲಾವಣೆ, ಡಿಜಿಟಲ್ ಮೂಲಸೌಕರ್ಯ, ತಂತ್ರಜ್ಞಾನ, ಸಂಪರ್ಕ, ಸಂಸ್ಕೃತಿ ವಿಷಯಗಳ ಜತೆಗೆ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತೂ ಚರ್ಚಿಸಿದರು.

'ನನ್ನ ಗೆಳೆಯ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಫಲಪ್ರದವಾದ ಚರ್ಚೆ ನಡೆಸಿದ್ದೇನೆ. ಒಂದು ವರ್ಷದಲ್ಲಿ ಇದು ನಮ್ಮ ನಾಲ್ಕನೇ ಭೇಟಿಯಾಗಿತ್ತು. ಶಕ್ತಿಯುತವಾದ ಭಾರತ-ಫ್ರಾನ್ಸ್ ಬಾಂಧವ್ಯಕ್ಕೆ ಆದ್ಯತೆ ನೀಡಿದ್ದೇವೆ. ರಕ್ಷಣೆ, ಭದ್ರತೆ, ತಂತ್ರಜ್ಞಾನ, ಕೃತಕಬುದ್ಧಿಮತ್ತೆ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ. ಯುವ ಜನರಲ್ಲಿ ನಾವೀನ್ಯತೆ ಹಾಗೂ ಸಂಶೋಧನೆಯನ್ನು ಹೇಗೆ ಉತ್ತೇಜಿಸಬೇಕು ಎಂಬುದರ ಕುರಿತೂ ಚರ್ಚಿಸಿದ್ದೇವೆ. ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಫ್ರಾನ್ಸ್‌ಗೆ ಶುಭಾಶಯಗಳನ್ನು ತಿಳಿಸಿದ್ದೇನೆ' ಎಂದು ಮೋದಿ ಹೇಳಿದ್ದಾರೆ.

'ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಭೇಟಿಯಿಂದ ಸಂತೋಷಗೊಂಡಿದ್ದೇನೆ. ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ ಹಾಗೂ ಬ್ರಿಟನ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ. ಸೆಮಿಕಂಡಕ್ಟರ್‌ಗಳು, ತಂತ್ರಜ್ಞಾನ, ವ್ಯಾಪಾರ ಹಾಗೂ ರಕ್ಷಣಾ ವಲಯಗಳಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ದೃಢವಾಗಿಸುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಿ7 ಶೃಂಗದಲ್ಲಿ ಭಾಷಣ ಮಾಡಿದ ಮೊದಲ ಧರ್ಮಗುರು

ಬಾರಿ (ಇಟಲಿ): ಪೋಪ್ ಫ್ರಾನ್ಸಿಸ್ ಅವರು ಶುಕ್ರವಾರ ಏಳು ರಾಷ್ಟ್ರಗಳ ಗುಂಪಿನ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೊದಲ ಧರ್ಮಗುರು ಎನ್ನುವ ಶ್ರೇಯಕ್ಕೆ ಪಾತ್ರರಾದರು. ದಕ್ಷಿಣ ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಮುಖ ಏಳು ರಾಷ್ಟ್ರಗಳು ಮತ್ತು ಇತರ ಆಹ್ವಾನಿತ ದೇಶಗಳ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡಿದ ಪೋಪ್‌ ಕೃತಕ ಬುದ್ಧಿಮತ್ತೆಯ ಅನುಕೂಲಗಳು ಮತ್ತು ಅಪಾಯಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ನಿಯೋಗಗಳ ಪ್ರತಿನಿಧಿಗಳ ಗೌಜುಗದ್ದಲದಿಂದ ಕೂಡಿದ್ದ ಸಭಾಂಗಣ ಪೋಪ್‌ ಅವರನ್ನು ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ಅವರ ಭಾಷಣ ಆಲಿಸಲು ಇಡೀ ಸಭಾಂಗಣ ಸ್ತಬ್ಧವಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿಯಾಗಿ ಕುಶಲೋಪರಿ ನಡೆಸಿದರು. ಭಾರತಕ್ಕೆ ಭೇಟಿ ನೀಡುವಂತೆಯೂ ಪೋಪ್‌ ಅವರಿಗೆ ಮೋದಿ ಆಹ್ವಾನ ನೀಡಿದರು.

ಜಿ7 ಶೃಂಗಸಭೆ: ಎರಡನೇ ದಿನ ವಲಸೆ ಸಮಸ್ಯೆಯತ್ತ ಗಮನ

ಬಾರಿ (ಇಟಲಿ): ಕೈಗಾರೀಕರಣಗೊಂಡ ಏಳು ಪ್ರಮುಖ ರಾಷ್ಟ್ರಗಳ ನಾಯಕರು ಶುಕ್ರವಾರ ಜಿ7 ಶೃಂಗಸಭೆಯ ಎರಡನೇ ದಿನದ ಅಧಿವೇಶನದ ಆರಂಭದಲ್ಲಿ ವಲಸೆ ಸಮಸ್ಯೆಗೆ ಗಮನ ಕೇಂದ್ರೀಕರಿಸಿ ಚರ್ಚೆ ನಡೆಸಿದರು. ಜನರು ಜೀವ ಅಪಾಯಕ್ಕೆ ಒಡ್ಡಿಕೊಂಡು ವಲಸೆ ಬರುವುದನ್ನು ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಯುವ ಕಳಕಳಿಯಿಂದ ಜನರು ವಲಸೆ ಹೋಗುತ್ತಿರುವ ದೇಶಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿ ಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಸಭೆಯಲ್ಲಿ ಉಕ್ರೇನ್‌ಗೆ ಹಣಕಾಸಿನ ನೆರವು ಗಾಜಾದಲ್ಲಿನ ಯುದ್ಧ ಕೃತಕ ಬುದ್ಧಿಮತ್ತೆ ಹವಾಮಾನ ಬದಲಾವಣೆ ಜೊತೆಗೆ ಚೀನಾದ ಕೈಗಾರಿಕಾ ನೀತಿ ಮತ್ತು ಆರ್ಥಿಕ ಭದ್ರತೆಯ ಬಗ್ಗೆಯೂ ಪ್ರಮುಖವಾಗಿ ಚರ್ಚಿಸಲಾಯಿತು. ಆದರೆ ಶೃಂಗಸಭೆಯ ಅಂತಿಮ ಘೋಷಣೆಯ ಚರ್ಚೆಯಲ್ಲಿ ಕೆಲವು ವಿಷಯಗಳ ಬಗ್ಗೆ ಪ್ರಮುಖ ನಾಯಕರಲ್ಲಿ ಭಿನ್ನಸ್ವರಗಳು ಹೊರಹೊಮ್ಮಿದವು. ಗರ್ಭಪಾತ ವಿಷಯದ ಉಲ್ಲೇಖವನ್ನು ಸೇರಿಸುವ ಬಗ್ಗೆ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿತು ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries