ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಫಲಿತಾಂಶದ ಬಳಿಕ ದೆಹಲಿಯಲ್ಲಿ ಸಭೆ ನಡೆಸಲು ಇಂಡಿಯಾ ಬಣ ನಿರ್ಧರಿಸಿದೆ.
ಇಂದು ಸಂಜೆ ಫಲಿತಾಂಶದವರೆಗೂ ಇಂಡಿಯಾ ಬಣದ ನಾಯಕರು ದೆಹಲಿಯಲ್ಲೇ ಉಳಿಯುವಂತೆ ಕಾಂಗ್ರೆಸ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ
ಒಂದೊಮ್ಮೆ ನಿರೀಕ್ಷೆಗೆ ತಕ್ಕ ಫಲಿತಾಂಶ ಬರದಿದ್ದರೆ ಪತ್ರಿಕಾಗೋಷ್ಠಿ, ರಾಷ್ಟ್ರಪತಿಗಳ ಭೇಟಿ ಸೇರಿದಂತೆ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗದ ಪಾತ್ರದ ಬಗ್ಗೆ ರಾಷ್ಟ್ರಪತಿಗಳಿಗೆ ದೂರು ನೀಡುವ ಬಗ್ಗೆಯೂ ಇಂಡಿಯಾ ಬಣ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟ 295ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ 'ಇಂಡಿಯಾ' ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಸಭೆ ಸೇರಿ ಜಯಿಸಬಹುದಾದ ಸ್ಥಾನಗಳ ಕುರಿತು ಲೆಕ್ಕ ಹಾಕಿದ್ದರು.
ಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಎಎಪಿ, ಎನ್‌ಸಿಪಿ (ಎಸ್‌ಪಿ), ಶಿವಸೇನಾ (ಯುಬಿಟಿ), ಡಿಎಂಕೆ, ಜೆಎಂಎಂ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಎಂ, ಸಿಪಿಐ, ಸಿಪಿಐ (ಎಂಎಲ್)ಎಲ್, ವಿಐಪಿ ಪಕ್ಷಗಳ 23 ನಾಯಕರು ಭಾಗವಹಿಸಿದ್ದರು.