ನವದೆಹಲಿ: ಇಂದು (ಜೂ.4) ಲೋಕಸಭಾ ಚುನಾವಣೆಯ ಮತಎಣಿಕೆ ನಡೆಯಲಿದೆ. ದೇಶದಾದ್ಯಂತ ಏಳು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಕಣದಲ್ಲಿರುವ 8 ಸಾವಿರ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮತಎಣಿಕೆ ಪ್ರಕ್ರಿಯೆ ಹೀಗಿರಲಿದೆ
1961ರ ಚುನಾವಣಾ ನಿಯಮ 54ರ ಅಡಿಯಲ್ಲಿ, ಮೊದಲು ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ
ಅಂಚೆ ಮತಎಣಿಕೆ ಆರಂಭವಾಗಿ 30 ನಿಮಿಷಗಳ ಬಳಿಕ ಇವಿಎಂ ಮತ ಎಣಿಕೆಯನ್ನು ಆರಂಭಿಸಲಾಗುತ್ತದೆ
ಅಂಚೆ ಮತಎಣಿಕೆ ಇಲ್ಲದ ಕ್ಷೇತ್ರಗಳಲ್ಲಿ ನಿಗದಿತ ಸಮಯಕ್ಕೆ ಇವಿಎಂ ಮತಎಣಿಕೆ ಆರಂಭಿಸಲಾಗುತ್ತದೆ
ಫಾರ್ಮ್ 17ಸಿ ಜೊತೆಗೆ ಮತ ಎಣಿಕೆಗೆ ಮತಗಟ್ಟೆಯಲ್ಲಿ ಬಳಸುವ ಇವಿಎಂನ ಕಂಟ್ರೋಲ್ ಯುನಿಟ್ (ಸಿಯು) ಮಾತ್ರ ಅಗತ್ಯವಿರುತ್ತದೆ.
ವಿದ್ಯುನ್ಮಾನ ಮತಯಂತ್ರದ ಮತ ಎಣಿಕೆಗೂ ಮೊದಲು, ಇವಿಎಂಗಳ ಕಂಟ್ರೋಲ್ ಯೂನಿಟ್‌ಗೆ ಮತದಾನದ ದಿನ ಅಳವಡಿಸಲಾದ ಕಾಗದದ ಮುದ್ರೆಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಖಚಿತಪಡಿಸಿಕೊಳ್ಳಬೇಕು. ನಂತರ ಅದರಲ್ಲಿ ಅಂದು ದಾಖಲಾದ ಮತಗಳು ಮತ್ತು ಮತಗಟ್ಟೆ ಅಧಿಕಾರಿ ನೀಡಿದ ದಾಖಲಾತಿಯಲ್ಲಿರುವ ಮತಗಳು ತಾಳೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
ಮತಎಣಿಕೆ ಕೇಂದ್ರದಲ್ಲಿ ಎಣಿಕೆ ಮೇಲ್ವಿಚಾರಕರು, ಸೂಕ್ಷ್ಮ ವೀಕ್ಷಕರು ಮತ್ತು ಅಭ್ಯರ್ಥಿಗಳ ಏಜೆಂಟ್‌ಗಳಿಗೆ ತೋರಿಸಿದ ಬಳಿಕ ಫಲಿತಾಂಶವನ್ನು ಫಾರ್ಮ್ 17ಸಿ ಯ ಎರಡನೇ ಭಾಗದಲ್ಲಿ ನಮೋದಿಸಲಾಗುತ್ತದೆ.
ಒಂದು ವೇಳೆ ಫಲಿತಾಂಶ ಪ್ರದರ್ಶನ ಫಲಕದಲ್ಲಿ ಕಾಣಿಸದಿದ್ದರೆ ಆಯಾ ವಿವಿಪ್ಯಾಟ್‌ಗಳ ಸ್ಲಿಪ್‌ಗಳನ್ನು ಕಂಟ್ರೋಲ್ ಯುನಿಟ್ ಎಣಿಕೆಯ ಬಳಿಕ ಎಣಿಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳ ಫಲಿತಾಂಶವನ್ನು ಮತಎಣಿಕೆ ಮೇಲ್ವಿಚಾರಕರು, ಅಭ್ಯರ್ಥಿ ಪರ ಏಜೆಂಟ್‌ಗಳು ಸಹಿ ಮಾಡಿದ ಪಾರ್ಮ್ 17 ಸಿ ಯ ಪಾರ್ಟ್ 2ನಲ್ಲಿ ನಮೂದಿಸಲಾಗುತ್ತದೆ.
ಪ್ರತಿ ಮತಗಟ್ಟೆಗಳ ಅರ್ಜಿ ನಮೂನೆ 17 ಸಿ ಅನ್ನು ಆ ಕ್ಷೇತ್ರದ ಫಲಿತಾಂಶ ಪ್ರಕಟಿಸುವ ಅಧಿಕಾರಿಗೆ ನೀಡಲಾಗುತ್ತದೆ
ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಪೂರ್ಣಗೊಂಡ ನಂತರವೇ ವಿವಿಪ್ಯಾಟ್‌ನಲ್ಲಿ ಸಂಗ್ರಹವಾದ ಮತಚೀಟಿಗಳ ಎಣಿಕೆ ಪ್ರಾರಂಭಿಸಲಾಗುತ್ತದೆ
ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾದ ಆಯ್ದ ಐದು ಮತಯಂತ್ರಗಳ ವಿವಿಪ್ಯಾಟ್‌ನಲ್ಲಿ ಸಂಗ್ರಹಗೊಂಡ ಮತಚೀಟಿಗಳ ಎಣಿಕೆಯು ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಮುಗಿದ ನಂತರ ನಡೆಯಲಿದೆ.
ಗೆಲುವಿನ ಅಂತರವು ತಿರಸ್ಕೃತಗೊಂಡ ಅಂಚೆ ಮತಪತ್ರಗಳ ಸಂಖ್ಯೆಗಿಂತ ಕಡಿಮೆ ಇದ್ದಾಗ, ಫಲಿತಾಂಶದ ಘೋಷಣೆಯ ಮೊದಲು ಈ ಮತಪತ್ರಗಳ ಮರುಪರಿಶೀಲನೆ ನಡೆಯಲಿದೆ.
ಒಂದು ವೇಳೆ ಇಬ್ಬರು ಅಭ್ಯರ್ಥಿಗಳು ಸಮಬಲ ಸಾಧಿಸಿದರೆ ಚೀಟಿ ಎತ್ತುವ ಮೂಲಕ ಗೆಲುವನ್ನು ನಿರ್ಧರಿಸಲಾಗುತ್ತದೆ.