ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದುಕೊಂಡಿದ್ದು ಸರ್ಕಾರ ರಚನೆಯ ಹಾದಿಯಲ್ಲಿದೆ.
543 ಲೋಕಸಭಾ ಸ್ಥಾನಗಳ ಪೈಕಿ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು 272 ಸ್ಥಾನಗಳನ್ನು ಗೆಲ್ಲಬೇಕಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸುವ ಸ್ಪಷ್ಟ ಬಹುಮತ ಪಡೆದಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿರೋಧ ಪಕ್ಷಗಳು ಸೇರಿ ಇಂಡಿಯಾ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಇಂಡಿಯಾ ಮೈತ್ರಿಕೂಟ 234 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿಕೂಟದಲ್ಲಿ ದೊಡ್ಡ ಪಕ್ಷವಾಗಿದೆ.
ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡುವ ಮ್ಯಾಜಿಕ್ ಸಂಖ್ಯೆಯನ್ನು ಪಡೆಯದಿದ್ದರೂ ಎನ್‌ಡಿಎ ಮೈತ್ರಿಕೂಟಕ್ಕಿಂತ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಎನ್‌ಡಿಎ ಶೇ 42.04ರಷ್ಟು ಮತ ಪಡೆದರೇ, ಇಂಡಿಯಾ ಮೈತ್ರಿ ಶೇ 45.38ರಷ್ಟು ಮತಗಳನ್ನು ಪಡೆದುಕೊಂಡಿದೆ. ಇತರರು ಶೇ 12.58ರಷ್ಟು ಮತಗಳನ್ನು ಪಡೆದಿದ್ದಾರೆ. ಒಟ್ಟಾರೆ ಇಂಡಿಯಾ ಶೇ 3 ರಷ್ಟು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ.
ಪ್ರಮುಖ ಪಕ್ಷಗಳು ಪಡೆದ ಪತ ಪ್ರಮಾಣ..
* ಬಿಜೆಪಿ - ಶೇ 36.56 (ಗೆದ್ದ ಸ್ಥಾನಗಳು-240)
* ಕಾಂಗ್ರೆಸ್- ಶೇ 21.19 (ಗೆದ್ದ ಸ್ಥಾನಗಳು-99)
* ಎಸ್‌ಪಿ- ಶೇ 4.58 (ಗೆದ್ದ ಸ್ಥಾನಗಳು-37)
* ಟಿಎಂಸಿ- ಶೇ 4.37 (ಗೆದ್ದ ಸ್ಥಾನಗಳು-29)
* ಡಿಎಂಕೆ- ಶೇ 1.82 (ಗೆದ್ದ ಸ್ಥಾನಗಳು-22)
* ಟಿಡಿಪಿ- ಶೇ 1.98 (ಗೆದ್ದ ಸ್ಥಾನಗಳು-16 )
* ಜೆಡಿ(ಯು)- ಶೇ 1.25 (ಗೆದ್ದ ಸ್ಥಾನಗಳು-12)