ಶ್ರೀನಗರ: ವೈಯಕ್ತಿಕ ಕಾರಣಗಳಿಂದಾಗಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಲಿರುವ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶನಿವಾರ ಹೇಳಿದ್ದಾರೆ.
'ನನ್ನ ತಾಯಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ನಾನು ಸಭೆಗೆ ಹಾಜರಾಗಲು ಸಾಧ್ಯವಿಲ್ಲ' ಎಂದು ಮೆಹಬೂಬಾ ಮುಫ್ತಿ 'ಪಿಟಿಐ'ಗೆ ತಿಳಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪಿಡಿಪಿ ಎರಡನ್ನೂ 'ಇಂಡಿಯಾ' ಮೈತ್ರಿಕೂಟದ ಸಭೆಗೆ ಆಹ್ವಾನಿಸಲಾಗಿದೆ. ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಶನಿವಾರ ಬೆಳಿಗ್ಗೆ ಶ್ರೀನಗರದಿಂದ ನವದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ನಡೆ ಹಾಗೂ ಫಲಿತಾಂಶಕ್ಕೂ ಮೊದಲು ಕಾರ್ಯತಂತ್ರವನ್ನು ರೂಪಿಸಲುವ ಸಲುವಾಗಿ ಸಭೆಯನ್ನು ಆಯೋಜಿಸಲಾಗಿದ್ದು, ರಾಜಕೀಯ ಕಾರ್ಯತಂತ್ರಗಳನ್ನು ಏಣಿಯಲಾಗುತ್ತದೆ ಎನ್ನಲಾಗಿದೆ.