ಸಾಹಿಬ್‌ಗಂಜ್: ವಿಶೇಷ ಪ್ರಕರಣವೊಂದರಲ್ಲಿ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ 92 ವರ್ಷದ ಅಂಗವಿಕಲ ಖಲೀಲ್ ಅನ್ಸಾರಿ ಅವರು ಇಂದು (ಶನಿವಾರ) ಮೊದಲ ಬಾರಿಗೆ ಮತದಾನ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಮಹಲ್ ಲೋಕಸಭಾ ಕ್ಷೇತ್ರದ ಬದ್ಖೋರಿ ಗ್ರಾಮದ ಅನ್ಸಾರಿ ಅವರು ಮುಂದ್ರೊದ ಮತಗಟ್ಟೆ ಸಂಖ್ಯೆ 10ರಲ್ಲಿ ಹಕ್ಕು ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ, 'ನಾನು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ಇದರಿಂದಾಗಿ ಸಂತೋಷವಾಗಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅನ್ಸಾರಿಯ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಏಪ್ರಿಲ್ 5ರಂದು ಮುಂದ್ರೊದ ಮತಗಟ್ಟೆಗಳ ಪರಿಶೀಲನೆಯ ಸಂದರ್ಭದಲ್ಲಿ ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕೆ.ರವಿ ಕುಮಾರ್ ಅವರು ಖಲೀಲ್ ಅವರ ಹೆಸರನ್ನು ತಕ್ಷಣವೇ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಸಾಹಿಬ್‌ಗಂಜ್ ಜಿಲ್ಲಾ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದ್ದರು.
ರಾಜ್ಯ ರಾಜಧಾನಿ ರಾಂಚಿಯಿಂದ 450 ಕಿ.ಮೀ. ದೂರ ಇರುವ ಸಾಹಿಬ್‌ಗಂಜ್ ಜಿಲ್ಲೆಯ ಮುಂದ್ರೊ ವಲಯದ ಮತಗಟ್ಟೆಗಳಿಗೆ ರವಿಕುಮಾರ್ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಅವರು, ಹಿರಿಯ ನಾಗರಿಕರನ್ನು ಮತ್ತು ಅಂಗವಿಕಲ ಮತದಾರರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದರು.
ಆಗ ಅವರು ಅನ್ಸಾರಿಯವರನ್ನು 'ನೀವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದೀರಾ' ಎಂದು ಪ್ರಶ್ನಿಸಿದ್ದರು. 'ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವುದರಿಂದ ಎಂದೂ ಮತದಾನ ಮಾಡಿಯೇ ಇಲ್ಲ' ಎಂದು ಖಲೀಲ್ ಉತ್ತರಿಸಿದ್ದರು.
ತಕ್ಷಣವೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದ್ದರು.