HEALTH TIPS

LS Results 2024: ಸ್ಮೃತಿಯಿಂದ ರಾಜೀವ್ ಚಂದ್ರಶೇಖರ್‌ವರೆಗೂ ಸೋತ ಸಚಿವರಿವರು

         ವದೆಹಲಿ: ತಮ್ಮ ಹರಿತವಾದ ಮಾತುಗಳ ಮೂಲಕವೇ ಗಮನ ಸೆಳೆದಿದ್ದ ಸಚಿವೆ ಸ್ಮೃತಿ ಇರಾನಿ ಒಳಗೊಂಡಂತೆ ಬಿಜೆಪಿಯ ಪ್ರಮುಖರಾದ ಅರ್ಜುನ್ ಮುಂಡಾ, ಅಜಯ್ ಮಿಶ್ರಾ ತೇಣಿ ಸೇರಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 15 ಜನ ಪರಾಭವಗೊಂಡಿದ್ದಾರೆ.

          ಹೀಗೆ ಸೋತವರಲ್ಲಿ ಬಹುತೇಕರು ಹಿಂದಿ ಭಾಷಿಕ ಪ್ರದೇಶಕ್ಕೆ ಸೇರಿದವರೇ ಆಗಿದ್ದಾರೆ.

ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟಗೊಂಡಿದೆ. ಲೋಕಸಭೆಯ 543 ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಬಿಜೆಪಿ 240 ಹಾಗೂ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ.

           ಈ ಬಾರಿ ಕೆಲ ಕೇಂದ್ರ ಸಚಿವರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಅವರಲ್ಲಿ ಪ್ರಮುಖರು...

ಸ್ಮೃತಿ ಇರಾನಿ: 2019ರಲ್ಲಿ ರಾಹುಲ್ ಗಾಂಧಿ ಅವರನ್ನು ಪರಾಭವಗೊಳಿಸುವ ಮೂಲಕ ಪ್ರಭಾವಿ ನಾಯಕಿ ಎನಿಸಿಕೊಂಡಿದ್ದ ಸ್ಮೃತಿ ಇರಾನಿ, ಈ ಬಾರಿ ಗಾಂಧಿ ಕುಟುಂಬದ ಆಪ್ತ, ಕಿಶೋರಿ ಲಾಲ್‌ ಶರ್ಮಾ ವಿರುದ್ಧ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯು ಬಿಜೆಪಿ ಕೈವಶವಾಗಿತ್ತು. ಇದನ್ನು ಅದನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಶರ್ಮಾ ಅವರು ಸ್ಮೃತಿ ಅವರನ್ನು 1,67,196 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಅಜಯ್ ಮಿಶ್ರಾ ತೇಣಿ: ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವರಾಗಿದ್ದ ಅಜಯ್ ಮಿಶ್ರಾ ಅವರು ವಿವಾದಿತ ಲಖೀಂಪುರ ಖೇರಿ ಘಟನೆಯಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ಸಮಾಜವಾದಿ ಪಕ್ಷದ ಉತ್ಕರ್ಷ ವರ್ಮಾ ಅವರು 34,329 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಅರ್ಜುನ್ ಮುಂಡಾ: ಜಾರ್ಖಂಡ್‌ನ ಖುಂತಿ ಕ್ಷೇತ್ರದಿಂದ ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವ ಅರ್ಜುನ್ ಮುಂಡಾ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಕಾಲಿಚರಣ್‌ ಮುಂಡಾ ಅವರು 1,49,675 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.

ಕೈಲಾಶ್ ಚೌಧರಿ: ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಲ್ಲಿ ಕಾಂಗ್ರೆಸ್‌ನ ಉಮ್ಮೇದಾ ರಾಮ್‌ ಬೇನಿವಾಲ್ ಅವರು ಸಾಧಿಸಿದ್ದಾರೆ. ಆದರೆ ಅಚ್ಚರಿ ಎಂದರೆ ಕೈಲಾಶ್ ಅವರು ಇಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರಿಗಿಂತ 3 ಲಕ್ಷ ಹೆಚ್ಚಿನ ಮತವನ್ನು ದ್ವಿತೀಯ ಸ್ಥಾನದಲ್ಲಿರುವ ಸ್ವತಂತ್ರ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ (5.86ಲಕ್ಷ) ಪಡೆದಿದ್ದಾರೆ.

ರಾಜೀವ್ ಚಂದ್ರಶೇಖರ್: ಕೇರಳದ ತಿರುವನಂತಪುರ ಕ್ಷೇತ್ರದಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್‌ನ ಶಶಿ ತರೂರ್‌ ವಿರುದ್ಧ 16,077 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಮಹೇಂದ್ರನಾಥ್ ಪಾಂಡೆ: ಕೇಂದ್ರ ಭಾರೀ ಕೈಗಾರಿಕಾ ಸಚಿವ ಮಹೇಂದ್ರ ನಾಥ್ ಪಾಂಡೆ ಅವರು ಉತ್ತರ ಪ್ರದೇಶದ ಚಂದೌಲಿ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.

ಕೌಶಲ್ ಕಿಶೋರ್: ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಸಮಾಜವಾದಿ ಪಾರ್ಟಿಯ ಆರ್.ಕೆ.ಚೌಧರಿ ವಿರುದ್ಧ 70,292 ಮತಗಳ ಅಂತರದಿಂದ ಪರಾಭಗೊಂಡಿದ್ದಾರೆ.

ಸಾಧ್ವಿ ನಿರಂಜನ್ ಜ್ಯೋತಿ: ಕೇಂದ್ರ ಗ್ರಾಹಕರ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಅವರು ಫತೇಪುರ್ ಕ್ಷೇತ್ರದಲ್ಲಿ ಸೋತಿದ್ದಾರೆ.

ರಾವ್ ಸಾಹೇಬ್ ದಾನ್ವೆ: ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಮಹಾರಾಷ್ಟ್ರದ ಜಲ್ನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಲ್ಯಾಣ್ ವೈಜಯಂತ್ ರಾವ್ ಕಾಳೆ ವಿರುದ್ಧ ಪರಾಭವಗೊಂಡಿದ್ದಾರೆ.

ಆರ್‌.ಕೆ.ಸಿಂಗ್: ಕ್ಯಾಬಿನೆಟ್ ಸಚಿವ ಆರ್.ಕೆ.ಸಿಂಗ್ ಅವರು ಬಿಹಾರದ ಅರ್ರಾ ಕ್ಷೇತ್ರದಲ್ಲಿ ಸಿಪಿಐಎಂನ ಸುದಾಮ ಪ್ರಸಾದ್‌ ವಿರುದ್ಧ ಪರಾಭವಗೊಂಡಿದ್ದಾರೆ.

ಕೇಂದ್ರ ಸಚಿವ ಸಂಜೀವ್ ಬಲ್ಯಾನ್‌ ಅವರು ಮುಝಾಫರ್‌ನಗರದ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಯ ಹರೀಂದ್ರ ಸಿಂಗ್ ಮಲ್ಲಿಕ್ ಅವರ ವಿರುದ್ಧ 24 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಕೇರಳದ ಅತ್ತಿಂಗಳ್ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ.

ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್‌ ಅವರು ತಮಿಳುನಾಡಿನ ನೀಲಗಿರೀಸ್ ಕ್ಷೇತ್ರದಲ್ಲಿ ಡಿಎಂಕೆಯ ಎ.ರಾಜಾ ವಿರುದ್ಧ 2.40ಲಕ್ಷ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ಅವರು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಟಿಎಂಸಿಯ ಜಗದೀಶ್ ಚಂದ್ರ ಬಸೂನಿಯಾ ವಿರುದ್ಧ ಪರಾಭವಗೊಂಡಿದ್ದಾರೆ.

ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಅವರು ತೃಣಮೂಲ ಕಾಂಗ್ರೆಸ್‌ನ ಆರುಪ್ ಚಕ್ರವರ್ತಿ ವಿರುದ್ಧ ಪಶ್ಚಿಮ ಬಂಗಾಳದ ಬಂಕುರಾ ಲೋಕಸಭಾ ಕ್ಷೇತ್ರದಲ್ಲಿ 32 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries