ತಿರುವನಂತಪುರ: ಬಾಬರಿ ಮಸೀದಿ ಧ್ವಂಸದ ವಿಷಯವನ್ನು ಶಾಲಾ ಪಠ್ಯದಿಂದ ಕೈಬಿಟ್ಟಿರುವುದನ್ನು ಕೇರಳದ ಸಚಿವ ಎಂ.ಬಿ. ರಾಜೇಶ್ ಟೀಕಿಸಿದ್ದು 'ಸರ್ಕಾರದ ಎಲ್ಲ ವ್ಯವಸ್ಥೆಯನ್ನು ಕೋಮುವಾದಗೊಳಿಸುವ ಕ್ರಮವಿದು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು' ಎಂದು ಹೇಳಿದ್ದಾರೆ.
'ಕಳೆದ 10 ವರ್ಷದಿಂದಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹದ್ದೇ ಕೆಲಸಗಳನ್ನು ಮಾಡುತ್ತಿದೆ. ಅವರ ಈ ಕ್ರಮದ ಹಿಂದೆ ಯಾವುದೇ ಅಜೆಂಡಾ ಇಲ್ಲ' ಎಂದು ಸಿಪಿಎಂ ನಾಯಕರೂ ಆಗಿರುವ ರಾಜೇಶ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿಗೆ ಸ್ಥಾನಗಳು ಕಡಿಮೆಯಾಗಿದ್ದರೂ, ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ಬಹುಮತ ಇಲ್ಲದಿದ್ದರೂ, ಸಂಘ ಪರಿವಾರ ತನ್ನ ಕೋಮು ಕಾರ್ಯಸೂಚಿಯಿಂದ ಹಿಂದೆ ಸರಿಯುತ್ತಿಲ್ಲ ಎಂಬುದನ್ನು ಎನ್‌ಸಿಇಆರ್‌ಟಿಯ ಪ್ರಸ್ತುತ ಕ್ರಮವು ಸಾಬೀತುಪಡಿಸಿದೆ ಎಂದು ಅವರು ಟೀಕಿಸಿದ್ದಾರೆ.
'ಇದು ಎಲ್ಲರಿಗೂ ಎಚ್ಚರಿಕೆ. ಪಠ್ಯಪುಸ್ತಕಗಳು ಮತ್ತು ಸರ್ಕಾರದ ಎಲ್ಲ ವ್ಯವಸ್ಥೆಯನ್ನು ಕೋಮುವಾದಗೊಳಿಸುವ ಸಂಘ ಪರಿವಾರ ಮತ್ತು ಎಲ್ಲ ಪ್ರಯತ್ನಗಳ ವಿರುದ್ಧ ಹೋರಾಟ ಮುಂದುವರಿಸಬೇಕಾಗಿದೆ' ಎಂದು ಸುದ್ದಿಗಾರರಿಗೆ ತಿಳಿಸಿದರು.