ನವದೆಹಲಿ: ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಈ ಮೂಲಕ 3ನೇ ಅವಧಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹಾದಿ ಸುಗಮವಾಗಿದೆ.
ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ಅವರು ಇದೇ ಭಾನುವಾರ ಜೂನ್ 9ರಂದು ನರೇಂದ್ರ ಮೋದಿ ಅವರು ದೇಶದ ಮುಂದಿನ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಚಿತಪಡಿಸಿದರು. ಸಮಾರಂಭವು ಜೂನ್ 9 ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಎನ್‌ಡಿಎ ಸಂಸದರಲ್ಲದೆ, ಮುಖ್ಯಮಂತ್ರಿಗಳು ಸೇರಿದಂತೆ ಮೈತ್ರಿಕೂಟದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮೋದಿ ನಾಯಕತ್ವವನ್ನು ಬೆಂಬಲಿಸುವ ನಿರ್ಣಯವನ್ನು ಪ್ರಸ್ತಾಪಿಸಿದಾಗ ಮಿತ್ರಪಕ್ಷಗಳು ಮತ್ತು ಸಂಸದರು ಅದನ್ನು ಅನುಮೋದಿಸಿದರು.
ಮೋದಿ ಅವರು ಎನ್‌ಡಿಎ ಸಂಸದರ ನಾಯಕರಾಗಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಅವರು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಇನ್ನು ಕೆಲವೇ ಹೊತ್ತಿನಲ್ಲಿ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಎನ್‌ಡಿಎ 293 ಸಂಸದರನ್ನು ಹೊಂದಿದ್ದು, 543 ಸದಸ್ಯರ ಲೋಕಸಭೆಯಲ್ಲಿ ಬಹುಮತದ 272 ಕ್ಕಿಂತ ಹೆಚ್ಚು ಇದೆ. ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಹೊಸ ಸರ್ಕಾರದಲ್ಲಿ ತಮ್ಮ ಪ್ರಾತಿನಿಧ್ಯದ ಪಾಲಿಗೆ ಸೌಹಾರ್ದಯುತ ಸೂತ್ರವನ್ನು ರೂಪಿಸಲು ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಚಂದ್ರಬಾಬು ನಾಯ್ಡು ಮಾತು: ಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೋದಿ ಸರಿಯಾದ ಸಮಯಕ್ಕೆ ಸೂಕ್ತ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೋದಿ ನೇತೃತ್ವದಲ್ಲಿ 3ನೇ ಬಾರಿ ಸರ್ಕಾರ ರಚಿಸುತ್ತಿರುವುದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.
ನಿತೀಶ್ ಕುಮಾರ್ ಮಾತನಾಡಿ, ಮೋದಿ ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆ ಅದನ್ನು ಮಾಡಲಿದ್ದಾರೆ. ಅಲ್ಲಿ ಇಲ್ಲಿ ವಿರೋಧ ಪಕ್ಷದವರು ಗೆದ್ದಿದ್ದಾರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ ಅವರಿಗೆ ನಮ್ಮ ಬೆಂಬಲವಿದೆ ಎಂದರು.