ಚೆನ್ನೈ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ಹರಿಹಾಯ್ದಿರುವ ಡಿಎಂಕೆ, 'ಕೊಟಿಗಟ್ಟಲೆ ಗಳಿಸುತ್ತಿರುವ ಕೋಚಿಂಗ್ ಕೇಂದ್ರಗಳ ಬೆನ್ನಿಗೆ ನಿಂತಿರುವ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ' ಎಂದು ಆರೋಪಿಸಿದೆ.
ಡಿಎಂಕೆಯ ಮುಖವಾಣಿ ಮುರಸೋಳಿಯ ಜೂನ್ 15ರ ಸಂಚಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪಕ್ಷವು, '1,563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕವನ್ನು ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಒಂದೊಮ್ಮೆ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರದಿದ್ದರೆ, ಬಿಜೆಪಿ ಸರ್ಕಾರವು ಈ ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿರಲಿಲ್ಲ. ನೀಟ್ ಪರೀಕ್ಷೆ ಆರಂಭವಾದ ದಿನದಿಂದಲೂ ಬಹಳಷ್ಟು ಅಕ್ರಮಗಳು ನಡೆದಿವೆ. ಆದರೆ ಬಿಜೆಪಿ ಸರ್ಕಾರ ಒಂದರಲ್ಲೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಪರಿಹಾರವೆಂದರೆ, ರಾಷ್ಟ್ರೀಯ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕವಷ್ಟೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ' ಎಂದಿದೆ.
'ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಹಗರಣ ಏಕಕಾಲಕ್ಕೆ ಗುಪ್ತವಾಗಿ ನಡೆದಿವೆ. ಹೀಗಾಗಿಯೇ ಜೂನ್ 14ಕ್ಕೆ ನಿಗದಿಯಾಗಿದ್ದ ಫಲಿತಾಂಶವನ್ನು ತರಾತುರಿಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ದಿನವಾದ ಜೂನ್ 4ರಂದೇ ಪ್ರಕಟಿಸಲಾಯಿತು' ಎಂದಿದೆ.
'ಕೃಪಾಂಕ ಎಂದರೆ ಒಂದು ಅಥವಾ ಎರಡು ಅಂಕಗಳನ್ನು ನೀಡಿರುವುದನ್ನು ಕೇಳಿದ್ದೇವೆ. ಆದರೆ 70ರಿಂದ 80 ಅಂಕಗಳನ್ನು ನೀಡಿದ್ದನ್ನು ಕೇಳಿದ್ದು ಇದೇ ಮೊದಲು. ರಾಷ್ಟ್ರೀಯ ಪರೀಕ್ಷಾ ಸಮಿತಿಯು ಇಂಥದ್ದೊಂದು ಕೃತ್ಯ ಎಸಗಿ ಇಡೀ ದೇಶಕ್ಕೇ ಅನ್ಯಾಯವೆಸಗಿದೆ. ಬಿಜೆಪಿ ಸರ್ಕಾರವು ಕೋಚಿಂಗ್ ಕೇಂದ್ರಗಳ ಬೆನ್ನಿಗೆ ನಿಂತು, ಕೋಟಿಗಟ್ಟಲೆ ಲೂಟಿ ಮಾಡಲು ಬಿಟ್ಟಿವೆ. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಪೊರೇಟ್ ಸಂಸ್ಕೃತಿಯನ್ನು ಹುಟ್ಟುಹಾಕಿದೆ' ಎಂದು ಆರೋಪಿಸಲಾಗಿದೆ.
'ತಮಿಳುನಾಡಿನಲ್ಲಿ ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳು ಆರಂಭದಿಂದಲೂ ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಲೇ ಬಂದಿವೆ. ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿ ರಾಷ್ಟ್ರಪತಿ ಅಂಕಿತಕ್ಕಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿ ರಾಜಕೀಯ ಮೆರೆದಿದೆ' ಎಂದು ಡಿಎಂಕೆ ದೂರಿದೆ.
'ನೀಟ್ ಪರೀಕ್ಷೆಯ ವಂಚನೆಯನ್ನು ಅರಿತ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೇ 5ರಂದು ನಡೆಸಲಾದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ. ಜತೆಗೆ ಇಂಥ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಕೂಡಾ ಅಭಿಪ್ರಾಯಪಟ್ಟಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಎನ್‌ಟಿಎ ಕುರಿತು ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ' ಎಂದು ಮುರಸೋಳಿಯಲ್ಲಿ ಬರೆಯಲಾಗಿದೆ.
'ಎನ್‌ಟಿಎ ಮತ್ತು ಕೇಂದ್ರ ಸರ್ಕಾರದ ಪರವಾಗಿ ಒಬ್ಬರೇ ವಕೀಲರು ನ್ಯಾಯಾಲಯದ ಮುಂದೆ ಹಾಜರಾಗಿ, ಪರೀಕ್ಷಾ ಸಂಸ್ಥೆ ಹಾಗೂ ಕೇಂದ್ರ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಲಯಕ್ಕೆ ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೃಪಾಂಕ ಹಗರಣ ಬಯಲಾದರೂ ಕೇಂದ್ರಕ್ಕೆ ತನ್ನ ತಪ್ಪಿನ ಅರಿವಿಲ್ಲ. ಇವೆಲ್ಲದಕ್ಕೂ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಪಡಿಸುವುದೊಂದೇ ಇರುವ ಮಾರ್ಗ' ಎಂದು ಹೇಳಲಾಗಿದೆ.