ನವದೆಹಲಿ: ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ(ಜೆಎನ್‌ಯುಎಸ್‌ಯು) ಬುಧವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು.
ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿನ ಅಕ್ರಮಗಳ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಮತ್ತು ಎನ್‌ಟಿಎ ರದ್ದುಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಎಡ-ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಸಂಘ(AlSA) ಮತ್ತು ದೆಹಲಿ ವಿಶ್ವವಿದ್ಯಾಲಯದ ಕ್ರಾಂತಿಕಾರಿ ಯುವ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ವಿದ್ಯಾರ್ಥಿಗಳು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ಎನ್ ಟಿಎ ರದ್ದುಗೊಳಿಸಬೇಕು ಎಂಬ ಘೋಷಣೆಗಳಿರುವ ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.
NEET-UG ಪರೀಕ್ಷೆಯನ್ನು ಮತ್ತೆ ನಡೆಸಬೇಕು ಮತ್ತು ಪರೀಕ್ಷೆಗಳ ಕೇಂದ್ರೀಕರಣವನ್ನು ಕೊನೆಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರವೇಶಕ್ಕಾಗಿ ಎನ್‌ಟಿಎ ನಡೆಸಿದ ಪರೀಕ್ಷೆಗಳನ್ನು ಸಹ ರದ್ದುಗೊಳಿಸಬೇಕೆಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ.
ಪರೀಕ್ಷೆಗಳಲ್ಲಿ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ನಂತರ UGC-NET ಮತ್ತು NET PG ಸೇರಿದಂತೆ ಎನ್ ಟಿಎ ನಡೆಸಿದ ಹಲವು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.