ಪಾಟ್ನಾ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಗುರುವಾರ ಮೊದಲ ಬಾರಿ ಬಿಹಾರದ ಇಬ್ಬರು ವ್ಯಕ್ತಿಗಳಾದ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಕುಮಾರ್ ಅವರನ್ನು ಬಂಧಿಸಿದೆ.
NEET-UG ಪೇಪರ್ ಸೋರಿಕೆ ಪ್ರಕರಣವನ್ನು ಜೂನ್ 25 ರಂದು ಬಿಹಾರ ಪೊಲೀಸ್ ಆರ್ಥಿಕ ಅಪರಾಧಗಳ ಘಟಕದಿಂದ(EOU) ಸಿಬಿಐ ವಹಿಸಿಕೊಂಡಿದ್ದು, ಮೊದಲ ಬಾರಿ ಇಬ್ಬರನ್ನು ಬಂಧಿಸಿದೆ. ಈ ಇಬ್ಬರು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಮೇ 4 ರಂದು ರಾಜ್ಯ ರಾಜಧಾನಿ ಪಾಟ್ನಾದಲ್ಲಿ NEET-UG ಪರೀಕ್ಷಾರ್ಥಿಗಳಿಗೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ಪೊಲೀಸರ ಇಒಯು ಈ ಹಿಂದೆ ಬಿಹಾರದಲ್ಲಿ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಜಾರ್ಖಂಡ್‌ನಲ್ಲಿ ಆರು ಮಂದಿ ಸೇರಿದಂತೆ 13 ಜನರನ್ನು ಬಂಧಿಸಿತ್ತು.
ಅಶುತೋಷ್ ಕುಮಾರ್ ಅವರ ಕೋರಿಕೆಯ ಮೇರೆಗೆ ವಸತಿ ವ್ಯವಸ್ಥೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಮನೀಶ್ ಪ್ರಕಾಶ್ ಅವರನ್ನು ರಾಜ್ಯ ರಾಜಧಾನಿಯಲ್ಲಿ ಬಂಧಿಸಿದೆ. ಅಶುತೋಷ್ ಅವರನ್ನು ಸಹ ಸಿಬಿಐ ಪಾಟ್ನಾದಲ್ಲಿಯೇ ಬಂಧಿಸಿದೆ.
ಇಂದು ಮಧ್ಯಾಹ್ನ 1:30ರ ಸುಮಾರಿಗೆ ಸಿಬಿಐ ತನಗೆ ಕರೆ ಮಾಡಿ, ತನ್ನ ಪತಿಯ ಬಂಧನದ ಬಗ್ಗೆ ಮಾಹಿತಿ ನೀಡಿದೆ ಎಂದು ಮನೀಶ್ ಪತ್ನಿ ಅರ್ಚನಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನ್ನ ಪತಿ ಒಬ್ಬ ಸಮಾಜ ಸೇವಕನಾಗಿದ್ದು, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಸೇರಿದಂತೆ ಆಗಾಗ್ಗೆ ಜನರಿಗೆ ಸಹಾಯ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
“ನಾಲ್ಕು ಅಥವಾ ಐದು ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡುವಂತೆ ಯಾರೋ ನನ್ನ ಪತಿಗೆ ಫೋನ್‌ನಲ್ಲಿ ಕೇಳುವುದನ್ನು ನಾನು ಕೇಳಿಸಿಕೊಂಡಿದೆ. ಆದರೆ ಅದು ಅಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ಅರ್ಚನಾ ತಿಳಿಸಿದ್ದಾರೆ.
ಮನೀಷ್ ತನ್ನ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅನುಕೂಲ ಮಾಡಿಕೊಟ್ಟಿದ್ದಾನೆ ಮತ್ತು ಸುಮಾರು 25 ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪೇಪರ್‌ಗಳನ್ನು ನೀಡಿ, ಕಂಠಪಾಠ ಮಾಡಲು ಖಾಲಿ ಶಾಲೆಯ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.