ನವದೆಹಲಿ: ವಿಷಯುಕ್ತ ಮದ್ಯ ಕುಡಿದು 58 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ತಮಿಳುನಾಡು ಸರ್ಕಾರಕ್ಕೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ನೋಟಿಸ್‌ನಲ್ಲಿ ಈ ದುರಂತದ ಕುರಿತು ಒಂದು ವಾರದಲ್ಲಿ ವಿಸ್ತೃತ ವರದಿ ಸಲ್ಲಿಸಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎನ್‌ಎಚ್‌ಆರ್‌ಸಿ, 'ವಿಷಯುಕ್ತ ಮದ್ಯ ಕುಡಿದು ಹಲವರು ಮೃತಪಟ್ಟಿರುವ ಮಾಧ್ಯಮ ವರದಿ ಆಧರಿಸಿ, ಈ ಬಗ್ಗೆ ಸ್ವಪ್ರೇರಣೆಯಿಂದ ಗಮನಹರಿಸಲಾಗಿದೆ. ಘಟನೆಯಲ್ಲಿ ಅಸ್ವಸ್ಥರಾದ ಮಹಿಳೆಯರು ಸೇರಿದಂತೆ ಹಲವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಮಾಧ್ಯಮಗಳ ಈ ವರದಿ ನಿಜವೇ ಆಗಿದ್ದರೆ, ಸಂತ್ರಸ್ತರ ಜೀವಿಸುವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ' ಎಂದು ಕಳವಳ ವ್ಯಕ್ತಪಡಿಸಿದೆ.
ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ವಿಷಯುಕ್ತ ಮದ್ಯ ಕುಡಿದು ಈವರೆಗೆ 58 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಅಸ್ವಸ್ಥರಾದ 219ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರದ ವಿರುದ್ಧ ಕ್ರಮಕ್ಕೆ ಒತ್ತಾಯ
ಚೆನ್ನೈ: ವಿಷಯುಕ್ತ ಮದ್ಯ ಕುಡಿದು 58 ಮಂದಿ ಮೃತಪಟ್ಟ ಘಟನೆ ಸಂಬಂಧ ಆಡಳಿತಾರೂಢ ಡಿಎಂಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಎಐಎಡಿಎಂಕೆ ದೂರು ಸಲ್ಲಿಸಿದೆ. ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ನಿಯೋಗವು ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿತು. ವಿಷಯುಕ್ತ ಮದ್ಯ ತಯಾರಿಕೆ ಮತ್ತು ಮಾರಾಟ ನಿಯಂತ್ರಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂಬ ಆರೋಪದ ಪತ್ರವನ್ನು ನಿಯೋಗವು ರಾಜ್ಯಪಾಲರಿಗೆ ಸಲ್ಲಿಸಿತು. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ 'ನಾವು ಸಲ್ಲಿಸಿದ ಜ್ಞಾಪನಾಪತ್ರದ ಕುರಿತು ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಕಲ್ಲಕುರಿಚ್ಚಿ ದುರಂತ ಘಟನೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆಯೇ' ಎಂದು ಪ್ರಶ್ನಿಸಿದರು. ಈ ಘಟನೆಯ ನೈತಿಕ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಎಂ.ಕೆ. ಸ್ಟಾಲಿನ್ ರಾಜೀನಾಮೆ ಸಲ್ಲಿಸಬೇಕು. ಘಟನೆಯ ನಿಷ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರ ನೇತೃತ್ವದ ಯಾವುದೇ ತನಿಖೆಯಿಂದ ಸಂತ್ರಸ್ತ ಜನರಿಗೆ ನ್ಯಾಯ ಸಿಗುವುದಿಲ್ಲ ಎಂದರು.