ಭುವನೇಶ್ವರ: ಒಡಿಶಾದಲ್ಲಿ 1990ರ ದಶಕದಲ್ಲಿ 'ಸೈನ್ ಬೋರ್ಡ್ ಪಾರ್ಟಿ' ಎಂದೇ ಟೀಕೆಗೆ ಒಳಗಾಗಿದ್ದ ಬಿಜೆಪಿ ಪಕ್ಷವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 24 ವರ್ಷಗಳ ನವೀನ್ ಪಟ್ನಾಯಕ್ ಅವರ ಆಡಳಿತವನ್ನು ಕೊನೆಗೊಳಿಸಿದೆ.
ಈ ಮೂಲಕ ಒಡಿಶಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಜ್ಜಾಗಿದೆ.
ಮತಗಟ್ಟೆ ಸಮೀಕ್ಷೆಗಳು ಸೇರಿದಂತೆ ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳನ್ನು ಬಿಜೆಪಿ ತಲೆಕೆಳಗಾಗಿಸಿತು. ವಿಧಾನಸಭೆಯ 147 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 78 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಬಿಜೆಡಿಗೆ ಆಘಾತ ಉಂಟುಮಾಡಿದೆ.
2019ರ ವಿಧಾನಸಭೆ ಚುನಾವಣೆಯಲ್ಲಿ 113 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ನವೀನ್ ಪಟ್ನಾಯಕ್, ಈ ಬಾರಿ ಕೇವಲ 51 ಸ್ಥಾನಗಳನ್ನು ಗಳಿಸಲು ಸಶಕ್ತವಾಯಿತು. ಕಾಂಗ್ರೆಸ್ 14, ಪಿಐ(ಎಂ) ಒಂದು ಸ್ಥಾನ ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 8 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ಈ ಬಾರಿ 20 ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ.
2000 ರಿಂದ 2009 ರವರೆಗೆ ಬಿಜೆಪಿಯು ಬಿಜೆಡಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿದರೂ, 2009ರ ಸಾರ್ವತ್ರಿಕ ಚುನಾವಣೆಗೂ ಮುಂಚೆಯೇ ಮೈತ್ರಿ ಮುರಿದುಬಿದ್ದಿತ್ತು.
ಬಿಜೆಡಿ ಪಕ್ಷವು ಕೇವಲ ಕೆಲವರ ಪರ ಪ್ರಚಾರ ಕಾರ್ಯದಲ್ಲಿ ಹೆಚ್ಚಿನ ಆಸ್ತಕಿ ಹೊಂದಿತ್ತು ಎಂದು ವರದಿ ತಿಳಿಸಿದೆ. ಆದರೆ ಬಿಜೆಪಿ ಅಭ್ಯರ್ಥಿಗಳ ಪರ ಹಲವು ಬಾರಿ ರೋಡ್ ಶೋ ಮಾಡುವ ಮೂಲಕ ಪ್ರಧಾನಿ ಪ್ರಚಾರ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ಪಟ್ನಾಯಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬುವುದನ್ನು ಪ್ರಮುಖ ಚುನಾವಣಾ ಪ್ರಚಾರದ ಅಸ್ತ್ರವಾಗಿ ಪ್ರಯೋಗಿಸಿದ್ದರು.
ಚುನಾವಣಾ ಪ್ರಚಾರದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಲು ಮೈಕ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಪಟ್ನಾಯಕ್ ಅವರ ಆರೋಗ್ಯದ ಬಗ್ಗೆಯೂ ಸಾರ್ವಜನಿಕವಾಗಿ ಪ್ರಶ್ನೆಗಳು ಎದ್ದಿದ್ದವು.
ಮೋದಿಯಲ್ಲದೆ, ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಹೇಮಾ ಮಾಲಿನಿ ಮುಂತಾದ ಬಿಜೆಪಿಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು ಬಿಜೆಪಿಗೆ ಲಾಭವಾಗಿದೆ ಎನ್ನಲಾಗಿದೆ.
ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಿಜೆಡಿ ಪರಾಭವಗೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.