ಒಡಿಶಾ :ಒಡಿಶಾದ 147 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 50 ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಜು ಜನತಾ ದಳ(ಬಿಜೆಡಿ) 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಜೆಡಿ ಅಧ್ಯಕ್ಷ ಹಾಗೂ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಧಾನಸಭಾ ಚುನಾವಣೆಯಲ್ಲಿ, ಕಾಂತಾಬಾಂಜಿ ಮತ್ತು ಹಿಂಜಿಲಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
8 ಮಂದಿ ಸಚಿವರಿಗೆ ಹಿನ್ನಡೆ
ಸದ್ಯದ ಮಾಹಿತಿ ಪ್ರಕಾರ, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಂಪುಟದ 8 ಮಂದಿ ಸಚಿವರಿಗೆ ಹಿನ್ನಡೆಯಾಗಿದೆ. ಅರಣ್ಯ ಮತ್ತು ಪರಿಸರ ಸಚಿವ ಪ್ರದೀಪ್ ಕುಮಾರ್ ಅಮತ್, ಸಚಿವ ಪ್ರಫುಲ್ಲ ಕುಮಾರ್ ಮಲ್ಲಿಕ್, ಉನ್ನತ ಶಿಕ್ಷಣ ಸಚಿವ ಅತಾನು ಸಬ್ಯಸಾಚಿ ನಾಯಕ್, ಸಾರಿಗೆ ಸಚಿವೆ ತುಕುನಿ ಸಾಹು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶೋಕ್ ಚಂದ್ರ ಪಾಂಡಾ, ಹಣಕಾಸು ಸಚಿವ ವಿಕ್ರಮ್ ಕೇಶರಿ ಅರುಖಾ, ಕೈಮಗ್ಗ ಮತ್ತು ಜವಳಿ ಸಚಿವೆ ರೀಟಾ ಸಾಹು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಸಂತಿ ಹೆಂಬ್ರಾಮ್ ಅವರಿಗೆ ಹಿನ್ನಡೆಯಾಗಿದೆ.
ಬೋನೈ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಹಾಗೂ ಹಾಲಿ ಶಾಸಕ ಲಕ್ಷ್ಮಣ್ ಮುಂಡಾ ಮುನ್ನಡೆ ಸಾಧಿಸಿದ್ದಾರೆ. ಘಾಸಿಪುರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸೌಮ್ಯ ರಂಜನ್ ಪಟ್ನಾಯಕ್ ಮುನ್ನಡೆ ಸಾಧಿಸಿದ್ದಾರೆ.
19 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ:
ಒಡಿಶಾದ 21 ಲೋಕಸಭಾ ಕ್ಷೇತ್ರಗಳ ಪೈಕಿ 19 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ 147 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಮೇ 13ರಿಂದ ಜೂನ್ 1ರವರೆಗೆ ಲೋಕಸಭೆ ಚುನಾವನೆ ಜೊತೆಗೆ 4 ಹಂತಗಳಲ್ಲಿ ಮತದಾನ ನಡೆದಿತ್ತು. ಕೆಲ ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಭವಿಷ್ಯ ನುಡಿದರೆ, ಮತ್ತೆ ಕೆಲವು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಬಿಜೆಪಿ ಮತ್ತು ಬಿಜೆಡಿ 147 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 145 ಮತ್ತು ಸಿಪಿಐ 7 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.
2019ರ ವಿಧಾನಸಭೆ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 112 ಕ್ಷೇತ್ರಗಳನ್ನು ಗೆದ್ದಿತ್ತು. 200ರಿಮದ ಸತತ ಐದನೇ ಬಾರಿಗೆ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.