ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆ ತೆಹ್ರೀಕ್- ಇ- ತಾಲಿಬಾನ್ ಪಾಕಿಸ್ತಾನ್‌ನ (ಟಿಟಿಪಿ) ಉನ್ನತ ಕಮಾಂಡರ್ ವಲಿಉಲ್ಲಾ ಹತನಾಗಿದ್ದಾನೆ.
ಲಕ್ಕಿ ಮಾರ್ವತ್ ಜಿಲ್ಲೆಯಲ್ಲಿ ಟಿಟಿಪಿ ಕಮಾಂಡರ್ ವಲಿಉಲ್ಲಾನನ್ನು ಬನ್ನು ಪ್ರದೇಶದ ಭಯೊತ್ಪಾದನಾ ನಿಗ್ರಹ ದಳ (ಸಿಟಿಡಿ) ಹತ್ಯೆಗೈದಿದೆ ಎಂದು 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಮಲಾಂಗ್ ಅಡ್ಡಾ ಬಳಿಯ ತಾಜೂರಿ ರಸ್ತೆ ಬಳಿ ನಡೆದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ, ಮೊದಲು ಭಯೋತ್ಪಾದಕರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ವಲಿಉಲ್ಲಾ ಹತನಾದ. ಪೊಲೀಸರನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆಸಿದ್ದ, ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲಿನ ದಾಳಿಯ ಅನೇಕ ಪ್ರಕರಣಗಳಲ್ಲಿ ವಲಿಉಲ್ಲಾ ಪೊಲೀಸರಿಗೆ ಬೇಕಾಗಿದ್ದ.
ಬಾಂಬ್ ಸ್ಫೋಟದಲ್ಲಿ ನಾಲ್ವರು ಸಾವು: ಅಫ್ಗಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಕುರ್‍ರಂ ಪ್ರದೇಶದಲ್ಲಿ ಭಾನುವಾರ ನಡೆದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಬುಡಕಟ್ಟು ಸಮುದಾಯದ ಹಿರಿಯರೊಬ್ಬರ ವಾಹನವು ಹತ್ತಿರದ ಮಾರುಕಟ್ಟೆಗೆ ಬಂದಾಗ ಅದನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಈವರೆಗೆ ಹೊತ್ತುಕೊಂಡಿಲ್ಲ.