ಮುಂಬೈ: ರಷ್ಯಾದ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವಿದ್ಯಾರ್ಥಿಗಳ ಪೈಕಿ ಒಬ್ಬ, ಸಾಯುವ ಹೊತ್ತಿನಲ್ಲಿ ಮನೆಯವರಿಗೆ ವಿಡಿಯೊ ಕರೆ ಮಾಡಿದ್ದ ಎಂದು ವರದಿಯಾಗಿದೆ.
ಮತ್ತೊಬ್ಬ ವಿದ್ಯಾರ್ಥಿನಿ ನಿಶಾ ಭೂಪೇಶ್ ಸೋನವಾನೆ ಎಂಬವರನ್ನು ರಕ್ಷಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
'ರಷ್ಯಾದಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಸದ್ಯ ಒಬ್ಬ ವಿದ್ಯಾರ್ಥಿಯ ಶವವನ್ನು ಹೊರತೆಗೆಯಲಾಗಿದೆ. ಉಳಿದ ಮೂವರ ದೇಹಗಳ ಹುಡುಕಾಟ ಮುಂದುವರಿದಿದೆ. ಶವಗಳನ್ನು ಭಾರತಕ್ಕೆ ತರಲಾಗುವುದು' ಎಂದು ಜಲಗಾಂವ್ (ಜಲಗ್ರಾಮ್) ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಅವರು ತಿಳಿಸಿದ್ದಾರೆ.
ಮೃತರಲ್ಲಿ ಮೂವರು ಜಲಗಾಂವ್ ಜಿಲ್ಲೆಯವರು. ಒಡಹುಟ್ಟಿದವರಾದ ಜಿಶಾನ್ ಮತ್ತು ಜಿಯಾ ಜಲಗ್ರಾಮ್, ಜಿಲ್ಲೆಯ ಅಮಲ್ನೇರ್‌ನವರಾದರೆ, ಹರ್ಷಲ್ ಬದಗಾಂವ್‌ನವರು.
'ಎಲ್ಲರೂ ವೊಲ್ಖೊವ್ ನದಿ ತೀರಕ್ಕೆ ತೆರಳಿದ್ದಾಗ ಜಿಶಾನ್, ಮನೆಗೆ ವಿಡಿಯೊ ಕರೆ ಮಾಡಿದ್ದ. ಅಲೆಗಳು ಬಲವಾಗಿ ಅಪ್ಪಳಿಸುತ್ತಿದ್ದುದನ್ನು ಕಂಡ ಆತನ ತಂದೆ ಮತ್ತು ಮನೆಯ ಇತರರು, ಎಲ್ಲರೂ ಕೂಡಲೇ ನದಿಯಿಂದ ಹೊರಗೆ ಬನ್ನಿ ಎಂದು ಆತಂಕದಿಂದ ಹೇಳಿದ್ದರು. ಅಷ್ಟರಲ್ಲೇ ಅವರೆಲ್ಲ ಕೊಚ್ಚಿಹೋದರು' ಎಂದು ಕುಟುಂಬದವರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಭಾರತೀಯ ರಾಯಭಾರ ಕಚೇರಿಗೆ ದುರಂತದ ವಿಚಾರ ಮುಟ್ಟಿಸಿ, ಸಂತಾಪ ಸೂಚಿಸಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ವೊಲ್ಖೊವ್ ನದಿ ತೀರದಲ್ಲಿ ವಿಹರಿಸುತ್ತಿದ್ದರು. ಆಕಸ್ಮಿಕವಾಗಿ ದುರಂತ ಸಂಭವಿಸಿದೆ. ನಿಶಾ ಭೂಪೇಶ್ ಸೋನವಾನೆ ಬದುಕುಳಿದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.
ದುರಂತದ ವಿಚಾರವನ್ನು ತಕ್ಷಣವೇ ಪೋಷಕರಿಗೆ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಪ್ರತಿನಿಧಿಗಳು ನಿಶಾ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿಯೂ ವಿಶ್ವವಿದ್ಯಾಲಯ ಹೇಳಿದೆ.
'ಮೃತದೇಹಗಳನ್ನು ಸಾಧ್ಯವಾದಷ್ಟು ಬೇಗನೆ ಭಾರತಕ್ಕೆ ಕಳಹಿಸಲು ಪ್ರಯತ್ನಿಸುತ್ತಿದ್ದೇವೆ. ರಕ್ಷಿಸಲಾಗಿರುವ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್/ಟ್ವಿಟರ್‌ನಲ್ಲಿ ತಿಳಿಸಿದೆ.