ನವದೆಹಲಿ: ಎಮ್‌ಎಸ್‌ಪಿಗೆ ಕಾನೂನಾತ್ಮಕ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 1 ರಂದು ಬಿಜೆಪಿಯ ಪ್ರತಿಕೃತಿ ದಹನ ಮತ್ತು ಆಗಸ್ಟ್ 15 ರಂದು ದೇಶಾದ್ಯಂತ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೋಮವಾರ ಘೋಷಿಸಿವೆ.
ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ(ಕೆಎಂಎಂ) ಮುಖಂಡ ಸರ್ವಣ್ ಸಿಂಗ್ ಪಂಧೇರ್ ಅವರು, ರೈತರ 'ದೆಹಲಿ ಚಲೋ' ಆಗಸ್ಟ್ 31 ರಂದು 200 ದಿನ ಪೂರೈಸುತ್ತದೆ. ಅಂದು ಪಂಜಾಬ್ ಹಾಗೂ ಹರಿಯಾಣ ಗಡಿಯಲ್ಲಿರುವ ಖಾನೌರಿ ಮತ್ತು ಶಂಭು ಪಾಯಿಂಟ್‌ಗಳನ್ನು ತಲುಪುವಂತೆ ಜನರಿಗೆ ಮನವಿ ಮಾಡಿದರು.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕೆಎಂಎಂ ಜಂಟಿ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಗಸ್ಟ್ 1 ರಂದು ರೈತರು ದೇಶಾದ್ಯಂತ ಜಿಲ್ಲಾ ಕೇಂದ್ರಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಡಳಿತಾರೂಢ ಬಿಜೆಪಿಯ ಪ್ರತಿಕೃತಿಗಳನ್ನು ದಹನ ಮಾಡಲಿದ್ದಾರೆ.
ಆಗಸ್ಟ್ 15 ರಂದು, ರೈತರು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಎಸ್‌ಕೆಎಂ ಮತ್ತು ಕೆಎಂಎಂ ನೇತೃತ್ವದಲ್ಲಿ ಪಂಜಾಬ್ ರೈತರು ಫೆಬ್ರುವರಿ 13 ರಂದು ದೆಹಲಿಗೆ 'ದೆಹಲಿ ಚಲೋ' ಮೆರವಣಿಗೆ ಪ್ರಾರಂಭಿಸಿದ್ದು, MSP ಸೇರಿದಂತೆ ರೈತರ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಹರಿಯಾಣ ಪೊಲೀಸರು ಸಿಮೆಂಟ್ ತಡೆಗೋಡೆ ಸೇರಿದಂತೆ ಬ್ಯಾರಿಕೇಡ್‌ಗಳ ಮೂಲಕ ರೈತರನ್ನು ತಡೆದಿದ್ದಾರೆ.