ಕಾನ್ಪುರ: ಸುಮಾರು ₹1,000 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಕಬಳಿಸಿದ ಆರೋಪದ ಮೇಲೆ ಟಿ.ವಿ ಪತ್ರಕರ್ತ ಸೇರಿ 14 ಮಂದಿಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಧಿಸಲಾಗಿದೆ.
ಕಂದಾಯ ಅಧಿಕಾರಿ ಮತ್ತು ಜಮೀನನ್ನು ಲೀಸ್‌ಗೆ ಪಡೆದಿದ್ದ ಸ್ಯಾಮ್ಯಯಲ್ ಗುರುದೇವ್ ಸಿಂಗ್ ಎಂಬವರ ದೂರಿನ ಆಧಾರದ ಮೇಲೆ ಪತ್ರಕರ್ತ ಅವೀಶ್ ದೀಕ್ಷಿತ್ ಸೇರಿ 14 ಮಂದಿಯನ್ನು ಬಂಧಿಸಲಾಗಿದೆ.
ಈ ಸಂಬಂಧ, ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹರೀಶ್ ಚಂದ್ರ ಹೇಳಿದ್ದಾರೆ.
ದೀಕ್ಷಿತ್ ಅವರನ್ನು ಇಂದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಈ ಸಂಬಂಧ ಪಿಟಿಐ ಜೊತೆ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಸಿಂಗ್, ದೀಕ್ಷಿತ್ ಸೇರಿದಂತೆ ಇನ್ನಿತರ 3 ಡಜನ್‌ನಷ್ಟು ಆರೋಪಿಗಳು ಪೋಶ್ ಸಿವಿಲ್ ಲೈನ್‌ನ 7,500 ಚದರ ಮೀನಷ್ಟು ಭೂಮಿಯನ್ನು ಅತಿಕ್ರಮಿಸಿದ್ದಾರೆ. ಈ ಭೂಮಿಯ ಮಾರುಕಟ್ಟೆ ಮೌಲ್ಯ ₹1,000 ಕೋಟಿ ಆಗಿದೆ ಎಂದೂ ತಿಳಿಸಿದ್ದಾರೆ.
ಈ ಸಂಬಂಧ ಪರಿಶೀಲನೆ ನಡೆಸಿದ ಹೆಚ್ಚುವರಿ ಡಿಎಂ ನೇತೃತ್ವದ ಕಂದಾಯ ಇಲಾಖೆಯ ತಂಡ ಅದು ಸರ್ಕಾರಿ ಭೂಮಿಯಾಗಿದೆ ಎಂಬುದನ್ನು ಪತ್ತೆ ಮಾಡಿದೆ.
1884ರಲ್ಲಿ ಈ ಭೂಮಿಯನ್ನು 99 ವರ್ಷಗಳಿಗೆ ಲೀಸ್‌ಗೆ ನೀಡಲಾಗಿತ್ತು. ಬಳಿಕ, 25 ವರ್ಷಗಳಿಗೆ ಲೀಸ್ ನವೀಕರಿಸಲಾಗಿತ್ತು. ಸದ್ಯ, ಅದೂ ಸಹ ಮುಕ್ತಾಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.