ನವದೆಹಲಿ: ಕಳೆದೊಂದು ವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಳೆಯಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ಈ ತಿಂಗಳಾರಂಭದಲ್ಲಿ ದಾಖಲೆ ಪ್ರಮಾಣದ ಉಷ್ಣಗಾಳಿಗೆ ಸಾಕ್ಷಿಯಾಗಿದ್ದ ದೆಹಲಿಯಲ್ಲಿ, ಜೂನ್ 28ರಂದು ದಶಕದಲ್ಲೇ ಅತೀ ಹೆಚ್ಚು ಮಳೆಯಾಗಿತ್ತು.
ದೆಹಲಿ ಏರ್‌ಪೋರ್ಟ್ ಟರ್ಮಿನಲ್-1ರ ಚಾವಣಿ ಕುಸಿದಿತ್ತು. ಇದರಿಂದ ವಿಮಾನಗಳ ಹಾರಾಟ ವ್ಯತ್ಯಯ ಉಂಟಾಗಿದೆ. ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿತ್ತು. ಟ್ರಾಫಿಕ್ ಜಾಮ್, ವಿದ್ಯುತ್ ಹಾಗೂ ನೀರಿನ ಪೂರೈಕೆಯಲ್ಲಿ ಏರುಪೇರಾಗಿದೆ.
ಕಳೆದ 24 ಗಂಟೆಯಲ್ಲಿ 60 ವಿಮಾನಗಳ ಹಾರಾಟ ರದ್ದಾಗಿವೆ. ಭಾನುವಾರ ವಿಮಾನಗಳ ಕಾರ್ಯಾಚರಣೆ ಎಂದಿನಂತೆ ಇತ್ತು. ವಿಮಾನಗಳು ಉಳಿದ ಎರಡು ಟರ್ಮಿನಲ್‌ಗಳಿಂದ ಹಾರಾಟ ನಡೆಸಿವೆ. ಆದರೆ ಕೆಲವು ವಿಮಾನಗಳ ಸೇವೆ ರದ್ದಾಗುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ದೆಹಲಿ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಮಿನಲ್-1 ಈಗ ಸ್ಥಗಿತಗೊಂಡಿದೆ. ಈ ಟರ್ಮಿನಲ್‌ನಿಂದ ಕಡಿಮೆ ವೆಚ್ಚದ ಪ್ರಯಾಣ ಕಲ್ಪಿಸುವ ಇಂಡಿಗೊ ಹಾಗೂ ಸ್ಪೈಸ್‌ಜೆಟ್ ವಿಮಾನಗಳು ಕಾರ್ಯಾಚರಿಸುತ್ತಿದ್ದವು.