ನವದೆಹಲಿ: ಮೀಸಲು ಮತ್ತು ಹಿಂದುಳಿದ ಪ್ರವರ್ಗಗಳಿಗೆ ಸೇರಿದ 1,195 ಅಭ್ಯರ್ಥಿಗಳು ಐದು ವರ್ಷಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಈ ಪೈಕಿ 2018ರಲ್ಲಿ 233 ಅಭ್ಯರ್ಥಿಗಳು, 2019ರಲ್ಲಿ 231; 2020ರಲ್ಲಿ 223; 2021ರಲ್ಲಿ 250 ಮತ್ತು 2022ರಲ್ಲಿ 258 ಅಭ್ಯರ್ಥಿಗಳು ನೇಮಕವಾಗಿದ್ದಾರೆ ಎಂದು ಲಿಖಿತ ಉತ್ತರ ನೀಡಿದೆ.
ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುತ್ತದೆ ಎಂದು ಕೇಂದ್ರ ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಈಗಿನ ಮೀಸಲು ನಿಯಮದ ಅನ್ವಯ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಪ್ರವರ್ಗಗಳಿಗೆ ಕ್ರಮವಾಗಿ ಶೇ 15, ಶೇ 7.5 ಮತ್ತು ಶೇ 27ರಷ್ಟು ಮೀಸಲಾತಿ ಒದಗಿಸಲಾಗಿದ್ದು, ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ನೇಮಕಾತಿ ಸಂದರ್ಭದಲ್ಲೂ ಅದನ್ನು ಪಾಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಎಸ್‌ಸಿ ಎಸ್‌ಟಿ ಒಬಿಸಿ ಪ್ರವರ್ಗಗಳಲ್ಲಿ ನೇಮಕಗೊಂಡವರು (ವರ್ಷ; ಐಎಎಸ್; ಐಪಿಎಸ್; ಐಎಫ್‌ಎಸ್ )
2018;97;72; 64
2019;103;75;53
2020;99;74;50
2021;97;99;54
2022;100;94;64