ಟೆಲ್ ಅವೀವ್: ಇಸ್ರೇಲ್ ಆಕ್ರಮಿತ ಮಜ್ದಾಲ್ ಶಾಮ್ಸ್ ಪ್ರದೇಶದ ಮೇಲೆ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಜೆರುಸಲೇಂ ಪೋಸ್ಟ್ ವರದಿ ಮಾಡಿದೆ.
ಶನಿವಾರ ಸಂಜೆ ರಾಕೆಟ್ ನಗರದ ಫುಟ್ಬಾಲ್ ಮೈದಾನದ ಬಳಿ ಅಪ್ಪಳಿಸಿದ ಪರಿಣಾಮ ಮಕ್ಕಳು ಮತ್ತು 10ರಿಂದ 20 ವರ್ಷದವರೆಗಿನ ಹದಿಹರೆಯದವರು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ.
19 ಮಂದಿ ಗಾಯಗೊಂಡಿದ್ದು, 6 ಮಂದಿ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೇಘನ್ ಡೇವಿಡ್ ಅಡೋಮ್(ಎಂಡಿಎ) ತಂಡವು ಆಸ್ಪತ್ರೆ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಗಾಯಾಳುಗಳಿಗೆ ನೀಡಲು ರಕ್ತದ ಕೊರತೆ ಕಾಡುತ್ತಿದ್ದು, ರಕ್ತದಾನಕ್ಕೆ ಜನರಿಗೆ ಕರೆ ನೀಡಲಾಗಿದೆ.
ಹಿಜ್ಬುಲ್ಲಾ ನೆಲೆಯಿಂದಲೇ ರಾಕೆಟ್ ಲಾಂಚ್ ಆಗಿದೆ ಎಂದು ಪ್ರಾಥಮಿಕ ತನಿಖೆ ಬಳಿಕ ಎಂಡಿಎ ಹೇಳಿದೆ. ದಕ್ಷಿಣ ಲೆಬನಾನ್‌ನ ಚೆಬಾದ ಹಳ್ಳಿಯೊಂದರಿಂದ ರಾಕೆಟ್ ಉಡಾಯಿಸಲಾಗಿದೆ ಎಂದು ಅದು ತಿಳಿಸಿದೆ.
'ರಾಕೆಟ್ ದಾಳಿ ಬಳಿಕ ಫುಟ್ಬಾಲ್ ಮೈದಾನದ ಬಳಿಗೆ ನಾವು ಆಗಮಿಸಿದೆವು. ಮೈದಾನದ ತುಂಬ ಭೀಕರ ಪರಿಸ್ಥಿತಿ ಇತ್ತು. ಬೆಂಕಿ ಹೊತ್ತಿಕೊಂಡಿತ್ತು. ಸಂತ್ರಸ್ತರು ಹುಲ್ಲಿನ ಮೇಲೆ ನರಳುತ್ತಿದ್ದರು. ಕೆಲವರನ್ನು ಸ್ಥಳೀಯ ಕ್ಲಿನಿಕ್‌ಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ, ಮತ್ತೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು'ಎಂದು ಎಂಡಿಎ ತಂಡದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಇಸ್ರೇಲ್ ವಾಯುಪಡೆ, ಭೂಸೇನೆ ಮತ್ತು ಇತರ ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿಯ ಅವಲೋಕನ ಮುಂದುವರಿಸಿದ್ದಾರೆ.
ಪಾಲೆಸ್ಟೀನ್‌ನ ಹಮಾಸ್ ಬಂಡುಕೋರರ ದಾಳಿ ಬಳಿಕ ಇಸ್ರೇಲ್ ತಿರುಗಿಬಿದ್ದಿದ್ದು,ಪ್ರತೀಕಾರ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ಇಸ್ರೇಲ್ ವಿರುದ್ಧ ದಾಳಿ ನಡೆಸುತ್ತಿವೆ.