ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಬುಧವಾರ ನಡೆದ ಭದ್ರತಾ ಪಡೆಗಳ ನಡುವಿನ ಎನ್ ಕೌಂಟರ್ ನಲ್ಲಿ ಕನಿಷ್ಠ12 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಛತ್ತೀಸ್ ಗಢ ಗಡಿ ಬಳಿ ನಡೆದ ಪೊಲೀಸರು ಮತ್ತು ನಕ್ಸಲೀಯರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ವಂಡೋಲಿ ಗ್ರಾಮದಲ್ಲಿ ಮಧ್ಯಾಹ್ನ ಸಿ60 ಕಮಾಂಡೋಗಳು ಮತ್ತು ನಕ್ಸಲೀಯರ ನಡುವೆ ಸುಮಾರು ಆರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಎನ್ ಕೌಂಟರ್ ಸ್ಥಳದಿಂದ 3 ಎಕೆ-47, 2 INSAS ರೈಫಲ್‌ಗಳು, ಏಳು ಸ್ವಯಂ ಚಾಲಿತ ಶಸಾಸ್ತ್ರಗಳು ಸೇರಿದಂತೆ 12 ನಕ್ಸಲೀಯರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.
ಹತ್ಯೆಗೀಡಾದ ನಕ್ಸಲೀಯರ ಪೈಕಿ ಒಬ್ಬನನ್ನು ತಿಪಗಡ ದಳದ ಉಸ್ತುವಾರಿ ಡಿವಿಸಿಎಂ ಲಕ್ಷ್ಮಣ್ ಅತ್ರಾಮ್ ಅಲಿಯಾಸ್ ವಿಶಾಲ್ ಅತ್ರಾಮ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಸಿ60 ಕಮಾಂಡೋ ತಂಡಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ನಕ್ಸಲೀಯರು ಅಡಗಿರುವ ಮಾಹಿತಿಯಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ. ಘಟನೆಯಲ್ಲಿ ಸಿ-60 ಕಮಾಂಡೋ ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಯೋಧರು ಸೇರಿದ್ದು, ಅವರು ಪ್ರಾಣಪಾಯದಿಂದ ಪಾರಾಗಿದ್ದು, ಅವರನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಸ್ಪಿ ವಿವರ ನೀಡಿದರು.