ನವದೆಹಲಿ: ಪ್ರಸಿದ್ಧ ಹಿಮಾಲಯನ್ ದೇವಾಲಯ ಬದರಿನಾಥದ ನೂತನ ಮುಖ್ಯ ಅರ್ಚಕರಾಗಿ ಅಮರನಾಥ್ ನಂಬೂದಿರಿ (27) ಅವರನ್ನು ನೇಮಿಸಲಾಗಿದೆ.
ಅಮರನಾಥ್ ಅವರು ಕಣ್ಣೂರಿನ ಕುಳಪುರಂನ ವಾರನಕೋಟಿಲ್ಲದ ಮುರಳೀಧರನ್ ನಂಬೂದಿರಿಯವರ ಪುತ್ರ.
ಇರಿಂಞಲಕುಡ ವೈದಿಕವೇದ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿರುವ ಅಮರನಾಥ ಪ್ರಸ್ತುತ ಬದರಿನಾಥ ದೇವಸ್ಥಾನದ ಸಹ ಅರ್ಚಕರಾಗಿದ್ದಾರೆ. ಈಗಿರುವ ಮುಖ್ಯ ಅರ್ಚಕರಾದ ಕಣ್ಣೂರು ಪಿಲಾತರ ವಡಕ್ಕೆಚಂದ್ರಮನ ಇಲ್ಲಂನ ಈಶ್ವರ ಪ್ರಸಾದ್ ನಂಬೂದಿರಿ ವಿರಮಿಸಿದ ಹಿನ್ನೆಲೆಯಲ್ಲಿ ಅಮರನಾಥ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೂತನ ಮುಖ್ಯ ಅರ್ಚಕರ ಪಟ್ಟಾಭಿಷೇಕ ಸಮಾರಂಭವು ಜುಲೈ 13 ಮತ್ತು 14 ರಂದು ಬದರಿನಾಥದಲ್ಲಿ ನಡೆಯಲಿದೆ.
ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಬದರಿನಾಥ ದೇವಾಲಯದ ಪೂಜಾ ಜವಾಬ್ದಾರಿಗಳನ್ನು ಶತಮಾನಗಳಿಂದ ಬ್ರಹ್ಮಚಾರಿ ಕೇರಳೀಯ ಬ್ರಾಹ್ಮಣರು ನಿರ್ವಹಿಸುವುದು ಕ್ರಮವಾಗಿದೆ. ಈಶ್ವರ ಪ್ರಸಾದ್ ಅವರು ನಂಬೂದಿರಿ ಬದರಿನಾಥದ ಪ್ರಧಾನ ಅರ್ಚಕರಾಗಿ ಬಹುಕಾಲ ಕಾರ್ಯನಿರ್ವಹಿಸಿ ಇದೀಗ ವಿರಮಿಸುತ್ತಿದ್ದಾರೆ.