ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯಲ್ಲಿ ಡಾ. ಟಿ.ಶ್ಯಾಮ ಭಟ್ ಇವರ ನೇತೃತ್ವದಲ್ಲಿ ಶ್ರೀ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಸೇವಾರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಲ್ಪಟ್ಟ ಗುರು ಭವನದ ಉದ್ಘಾಟನ ಸಮಾರಂಭ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಜು.13ರಂದು ಶನಿವಾರ ಜರಗಲಿದೆ. ಅಂದು ಬೆಳಗ್ಗೆ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸನಾತನ ಸಂತ ಸಮಾಗಮ :
ಗುರುಭವನದ ಉದ್ಘಾಟನ ಸಮಾರಂಭದ ಅಂಗವಾಗಿ ಬೆಳಗ್ಗೆ 9.30ಕ್ಕೆ ನಡೆಯಲಿರುವ ಸನಾತನ ಸಂತ ಸಮಾಗಮದಲ್ಲಿ ಪರಮಪೂಜ್ಯ ಯತಿವರೇಣ್ಯರುಗಳಾದ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಶ್ರೀ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಶ್ರೀ ಮೂಡಬಿದ್ರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ, ಶ್ರೀ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಮಾಣಿಲ ಮಠದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕಣಿಯೂರು ಮಠದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಜೋರ್ಜ್ ಕುರಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಹಾಗೂ ಆಶಯ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1.30ರಿಂದ 3.30ರ ತನಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗುರುಭವನದ ಉದ್ಘಾಟನೆ :
ಸಂಜೆ 4ರಿಂದ 6 ಗಂಟೆಯ ತನಕ ಗುರು ಭವನದ ಉದ್ಘಾಟನ ಸಮಾರಂಭ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6ರಿಂದ 9 ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಲಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳು:
ಮಧ್ಯಾಹ್ನ 1.30ರಿಂದ 3.30ರ ತನಕ ಸುಂದೋಪಸುಂದ ಯಕ್ಷಗಾನ ಪ್ರದರ್ಶನದಲ್ಲಿ ಗಾನಕೋಗಿಲೆ ದಿನೇಶ ಅಮ್ಮಣ್ಣಾಯ ಹಾಡುಗಾರಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚೆಂಡೆಯಲ್ಲಿ, ಲವಕುಮಾರ ಐಲ ಮದ್ದಳೆಯಲ್ಲಿ ಹಾಗೂ ನಿಶ್ಚಿತ್ ಜೋಗಿ ಚಕ್ರತಾಳದಲ್ಲಿ ಜೊತೆಗೂಡಲಿದ್ದಾರೆ. ಸುಂದನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಉಪಸುಂದನಾಗಿ ಪನೆಯಾಲ ರವಿರಾಜ ಭಟ್, ತಿಲೋತ್ತಮೆಯಾಗಿ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಸುಧೀರ್ ಉಪ್ಪೂರು, ಬ್ರಹ್ಮನಾಗಿ ಲಕ್ಷ್ಮಣಕುಮಾರ್ ಮರಕಡ, ದೇವೇಂದ್ರನಾಗಿ ದೇವಕಾನ ಶ್ರೀಕೃಷ್ಣ ಭಟ್ ಪಾತ್ರ ನಿರ್ವಹಿಸಲಿದ್ದಾರೆ. ಸಂಜೆ 6ರಿಂದ ವಿದುಷಿ ನಿತ್ಯಶ್ರೀ ಮಹಾದೇವ್ ಚೆನ್ನೈ ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಲಿದೆ. ವಯಲಿನ್‍ನಲ್ಲಿ ವಿದ್ವಾನ್ ಇಡಪ್ಪಳ್ಳಿ ಅಜಿತ್ ಕುಮಾರ್, ಮೃದಂಗದಲ್ಲಿ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಪೊಳ್ಳಾಟಂಞ್ಞೂರು ಶ್ರೀಜಿತ್ ಜೊತೆಗೂಡಲಿದ್ದಾರೆ.
ಶ್ರೀಮಠದ ಶಿಷ್ಯವೃಂದದವರು, ಹಿತೈಷಿಗಳು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ತಿಳಿಸಲಾಗಿದೆ.