ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲುಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕೆರಿಯರ್ ಪವರ್, 99 ನೋಟ್ಸ್, ವಿದ್ಯಾ ಗುರು, ಗೈಡೈನ್ಸ್ ಐಎಎಸ್ ಸೇರಿದಂತೆ ಒಟ್ಟು 13 ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಲಾಗಿದ್ದು, ನೋಟಿಸ್ ಅಂಟಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಉತ್ತರ ದೆಹಲಿಯ ಮುಖರ್ಜಿ ನಗರದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆ ಬೆನ್ನಲ್ಲೇ ಎಸಿಡಿ ಕೋಚಿಂಗ್ ಸೆಂಟರ್‌ಗಳ ಸಮೀಕ್ಷೆಯನ್ನು ನಡೆಸಿತ್ತು.
ಶನಿವಾರ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಎರ್ನಾಕುಳಂ ಜಿಲ್ಲೆಯ ನವೀನ್ ಡೆಲ್ವಿನ್ (29), ತೆಲಂಗಾಣದಲ್ಲಿ ನೆಲೆಸಿರುವ ಬಿಹಾರದ ಔರಂಗಾಬಾದ್‌ನ ತಾನ್ಯಾ ಸೋನಿ (21) ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್ ಎಂದು ಗುರುತಿಸಲಾಗಿದೆ. ಈ ಮೂವರೂ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು.
ತಾನ್ಯಾ ಅವರು ದೆಹಲಿ ವಿಶ್ವವಿದ್ಯಾಲಯದ ಮಹಾರಾಜಾ ಅಗ್ರಸೇನ್ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ರಾವ್ಸ್ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.
ನವೀನ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದು, ಕೋಚಿಂಗ್ ಸೆಂಟರ್‌ನಲ್ಲಿ ಎಂಟು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಬಿಎಸ್‌ಸಿ (ಕೃಷಿ) ವ್ಯಾಸಂಗ ಮಾಡಿರುವ ಶ್ರೇಯಾ, ಎರಡು ತಿಂಗಳ ಹಿಂದೆ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದರು.