ಕೋಝಿಕ್ಕೋಡ್: ರಾಜ್ಯದಲ್ಲಿ ನಿಪಾ ಸೋಂಕಿನಿಂದ ಮತ್ತೊಂದು ಸಾವು ದಾಖಲಾಗಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪುರಂನ ಪಂಡಿಕ್ಕಾಡ್ ಮೂಲದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಎರಡು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ನಿನ್ನೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಐಸೋಲೇಶನ್ ವಾರ್ಡ್‍ಗೆ ದಾಖಲಿಸಲಾಗಿತ್ತು. ಪುಣೆಯ ವೈರಾಲಜಿ ಲ್ಯಾಬ್‍ನಲ್ಲಿ ಜೊಲ್ಲುರಸ ಪರೀಕ್ಷೆಯ ಸಕಾರಾತ್ಮಕ ಫಲಿತಾಂಶದಿಂದ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮೊದಲು ಇಲಿ ಜ್ವರದ ಶಂಕೆ ಇತ್ತು. ಮಗುವಿನ ಪೋಷಕರು, ಚಿಕ್ಕಪ್ಪ ಮತ್ತು ಸ್ನೇಹಿತರು ನಿಗಾದಲ್ಲಿದ್ದಾರೆ.
ನಿಪಾ ಪ್ರೊಟೋಕಾಲ್ ಪ್ರಕಾರ ಮಗುವಿನ ಅಂತ್ಯಕ್ರಿಯೆ ನಡೆಯಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಮಗುವಿನೊಂದಿಗೆ ಸಂಪರ್ಕದಲ್ಲಿರುವ 64 ಜನರು ಹೆಚ್ಚಿನ ಅಪಾಯದ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಐಸೋಲೇಷನ್‍ನಲ್ಲಿರುವ 4 ಮಂದಿಗೆ ನಿಪಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ದೃಢೀಕರಿಸಲು ಜೊಲ್ಲನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ ಒಬ್ಬರು ಐಸಿಯುನಲ್ಲಿದ್ದಾರೆ ಎಂದು ಸಚಿವರು ಹೇಳಿದರು.
ಇದೇ ತಿಂಗಳ 10ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಮೊದಲಿಗೆ ಮನೆ ಸಮೀಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದು ಜ್ವರ ಕಡಮೆಯಾಗದಿದ್ದಾಗ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅಲ್ಲಿಂದ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಜೀವ ಉಳಿಸಿಕೊಳ್ಳಲು ವೆಂಟಿಲೇಟರ್ ನೆರವಿನ ಅಗತ್ಯವಿದ್ದ ಕಾರಣ ಅವರನ್ನು 19ರಂದು ರಾತ್ರಿ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಜೊಲ್ಲುರಸ ಪರೀಕ್ಷೆಯ ಫಲಿತಾಂಶ ಬಂದ ನಂತರ ಬಾಲಕನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ರಾಜ್ಯದಲ್ಲಿ ಈವರೆಗೆ 22 ಮಂದಿ ನಿಪಾದಿಂದ ಸಾವನ್ನಪ್ಪಿದ್ದಾರೆ.