ಕೋಝಿಕ್ಕೋಡ್: ಆಸ್ಟ್ರೇಲಿಯಾದಿಂದ ತರಿಸಿದ ಔಷಧಿ ನೀಡುವ ಮುನ್ನವೇ ನಿಪಾ ಬಾಧಿತ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪುಣೆಯಲ್ಲಿ ಸಂಗ್ರಹವಾಗಿರುವ ಮೊನೊಕ್ಲೋನಲ್ ಆ್ಯಂಟಿಬಾಡಿಗಾಗಿ ಕೇರಳ ಅಧಿಕೃತವಾಗಿ ವಿನಂತಿಸಿತ್ತು.
ರೋಗಲಕ್ಷಣಗಳು ಕಾಣಿಸಿಕೊಂಡ ಐದು ದಿನಗಳಲ್ಲಿ ರೋಗಿಗೆ ಔಷಧವನ್ನು ನೀಡಬೇಕು ಎಂಬುದು ಷರತ್ತು. ಹತ್ತು ದಿನ ಕಳೆದರೂ ಬೇರೆ ದಾರಿ ಇಲ್ಲದ ಕಾರಣ ಔಷಧಿ ನೀಡಲು ನಿರ್ಧರಿಸಿದ್ದೇವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದ್ದರು.
ಆಸ್ಟ್ರೇಲಿಯಾದಿಂದ ಪ್ರತಿಕಾಯ ಔಷಧವನ್ನು ಮತ್ತು ಪುಣೆಯಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಲಸಿಕೆಯನ್ನು ತಲುಪಿಸಲಾಯಿತು. ಇದನ್ನು ನೀಡುವ ಮೊದಲು, ಬೆಳಿಗ್ಗೆ 10.50 ರ ಸುಮಾರಿಗೆ ಮಗುವಿಗೆ ಹೃದಯಾಘಾತವಾಗಿತ್ತು. ಬೆಳಗ್ಗೆ 11.30ರ ಸುಮಾರಿಗೆ ಸಾವು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಿಂದ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸುವಾಗ ಬಾಲಕ ಪ್ರಜ್ಞಾಶೂನ್ಯನಾಗಿದ್ದ. ಮಗುವನ್ನು ವೆಂಟಿಲೇಟರ್‍ಗೆ ಸ್ಥಳಾಂತರಿಸಲಾಗಿತ್ತು. ಬೆಳಿಗ್ಗೆಯಿಂದ ಮೂತ್ರದ ಪ್ರಮಾಣ ಕಡಮೆಯಾಗಿತ್ತು. ಜೀವ ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದರು.
ಮಗುವಿನ ಕುಟುಂಬದ ಹಿತದೃಷ್ಟಿಯಿಂದ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮಗುವಿನ ತಂದೆ ಮತ್ತು ತಂದೆಯ ಸಹೋದರ ಸೇರಿದಂತೆ ಮೂವರು ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಶನ್‍ನಲ್ಲಿದ್ದಾರೆ. ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ನಾಲ್ವರು ಐಸೋಲೇಶನ್‍ನಲ್ಲಿದ್ದಾರೆ. ಅವರಲ್ಲಿ ಒಬ್ಬರು ಐಸಿಯುನಲ್ಲಿದ್ದಾರೆ. ಹೆಚ್ಚಿನ ಅಪಾಯದಲ್ಲಿರುವ ಜನರ ಸಂಪೂರ್ಣ ಮಾದರಿಯನ್ನು ಪರಿಶೀಲಿಸಲಾಗುವುದು ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
14 ವರ್ಷದ ಬಾಲಕ ಮಲಪ್ಪುರಂನ ಪಂಡಿಕ್ಕಾಡ್ ಮೂಲದವನು. ಇದೇ ತಿಂಗಳ 10ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಮೊದಲಿಗೆ ಮನೆ ಸಮೀಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದು ಜ್ವರ ಕಡಮೆಯಾಗದಿದ್ದಾಗ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅಲ್ಲಿಂದ ಪೆರಿಂತಲ್ಮಣ್ಣ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಪರೀಕ್ಷೆಯ ಫಲಿತಾಂಶ ಬಂದ ನಂತರ ಬಾಲಕನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು.